June 1, 2026
01

ಹಿರಿಯೂರು :

ತಾಲೂಕಿನಾದ್ಯಂತ ಜೂಜಾಟ ಮಿತಿಮೀರಿದ್ದು, ರೈತರ ಬೋರ್ವೆಲ್ ಕೇಬಲ್ ಹಾಗೂ ವಾಹನಗಳ ಕಳ್ಳತನ ಪ್ರಕರಣಗಳು ಸರಣಿಯಾಗಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮೌನಕ್ಕೆ ಶರಣಾಗಿದೆ ಎಂಬುದಾಗಿ ಹಿರಿಯೂರು ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷರಾದ ಆಲೂರುಸಿದ್ದರಾಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿರಿಯೂರು ಗ್ರಾಮಾಂತರ ಡಿ.ವೈ.ಎಸ್.ಪಿ ಅವರಿಗೆ ಲಿಖಿತ ಮನವಿ ಸಲ್ಲಿಸಿದ ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಪ್ರಸ್ತುತ ಮಳೆ ಇಲ್ಲದೆ ಬೆಳೆಯೂ ಕೈಗೆ ಬಾರದೆ ರೈತರು ಜೀವನ ನಡೆಸುವುದೇ ದುಸ್ತರವಾಗಿದೆ, ಇಂತಹ ಸಂಕಷ್ಟದ ಸಮಯದಲ್ಲಿ ಜಮೀನುಗಳಲ್ಲಿ ಅಳವಡಿಸಿರುವ ಬೋರ್ವೆಲ್ ಗಳ ಕೇಬಲ್ ವೈರ್ ಗಳನ್ನು ಕಳ್ಳರು ಕಟ್ ಮಾಡಿ ಹೊತ್ತೊಯ್ಯುತ್ತಿದ್ದಾರೆ.

ಮಲ್ಲಪ್ಪನ ಗ್ರಾಮ ಈ ಒಂದೇ ಗ್ರಾಮದಲ್ಲಿ ಸುಮಾರು 10 ರಿಂದ 12 ಜನ ರೈತರ ಬೋರ್ವೆಲ್ ಕೇಬಲ್ ಗಳನ್ನು ಕಳ್ಳತನ ಮಾಡಲಾಗಿದೆ, ಕೇವಲ ಕೇಬಲ್ ಮಾತ್ರವಲ್ಲದೆ ಮನೆ ಮುಂದೆ ನಿಲ್ಲಿಸಿದ್ದ ಬೋಲೇರೋ ವಾಹನವನ್ನು ಸಹ ಕಳ್ಳರು ಕರೆದು ಕದ್ದೊಯ್ದಿದ್ದು, ಇದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ.

ತಾಲೂಕಿನ ಪ್ರತಿಯೊಂದು ಹಳ್ಳಿಯಲ್ಲೂ ಇಸ್ಪೀಟ್ ದಂಧೆ ಮತ್ತು ಜೂಜಾಟ ತಾಂಡವಾಡುತ್ತಿದೆ ಇದರಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ, ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸ್ ಸಿಬ್ಬಂದಿ ಮಾತ್ರ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ, ಪೊಲೀಸರ ಈ ನಿರ್ಲಕ್ಷ ಧೋರಣೆಯಿಂದಾಗಿ ಕಳ್ಳತನಗಳು ಮಿತಿಮೀರುತ್ತಿವೆ ಎಂದು ಅವರು ದೂರಿದ್ದಾರೆ.

ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ ಹೀಗೆ ಕಳ್ಳತನಗಳು ಮುಂದುವರೆದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ದೂರವಿಲ್ಲ, ರೈತರು ನೆಮ್ಮದಿಯಿಂದ ಇರಬೇಕಾದರೆ ನಿಮ್ಮ ಸಿಬ್ಬಂದಿಗಳು ಹೆಚ್ಚಿನ ಶ್ರದ್ಧೆಯಿಂದ ಕೆಲಸ ಮಾಡುವಂತೆ ಈಗಲಾದರೂ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಅವರು ಮನವಿ ಮಾಡಿದರು.

ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತರಾಗಿ ಜೂಜಾಟದ ಅಡ್ಡಗಳ ಮೇಲೆ ದಾಳಿ ಮಾಡಬೇಕು ಮತ್ತು ಕಳ್ಳರನ್ನು ಪತ್ತೆ ಹಚ್ಚಿ ರೈತರಿಗೆ ನ್ಯಾಯ ಒದಗಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂಬುದಾಗಿ ರೈತ ಸಂಘದ ಗೌರವಾಧ್ಯಕ್ಷರಾದ ಆಲೂರುಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

About The Author

Leave a Reply

Your email address will not be published. Required fields are marked *