
ಹಿರಿಯೂರು :
ನಗರದಲ್ಲಿ ರೆಡ್ ಕ್ರಾಸ್ ಹಾಗೂ ರೋಟರಿ ಸಂಸ್ಥೆ ವತಿಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಸಾರ್ವಜನಿಕರ ಹಿತದೃಷ್ಠಿಯಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಉಚಿತ ಶಸ್ತ್ರ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸುವ ಮೂಲಕ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದಾಗಿ ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್ ಹೇಳಿದರು.

ನಗರದ ರೋಟರಿ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಸಂಸ್ಥೆ ಸರ್ವೋದಯ ಬ್ರಹ್ಮಜ್ಞಾನ ಸಮಾಜ, ಲಯನ್ಸ್ ಐ ಹಾಸ್ಪೆಟಲ್ ಬೆಂಗಳೂರು, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಸ್ತ್ರ ಚಿಕಿತ್ಸೆ ಅಗತ್ಯವಿರುವ ಶಿಬಿರಾರ್ಥಿಗಳಿಗೆ ಯಾವುದೇ ಹಣವನ್ನು ಪಡೆಯದೇ ದಾನಿಗಳ ಸಹಕಾರದಿಂದ ಉಚಿತ ಶಸ್ತ್ರ ಚಿಕಿತ್ಸೆ ನೀಡಲಾಗುತ್ತಿದ್ದು, ಶಸ್ತ್ರ ಚಿಕಿತ್ಸೆಗೆ ಒಳಪಡುವ ಶಿಬಿರಾರ್ಥಿಗಳು ಯಾವುದೇ ಕಾರಣಕ್ಕೂ ಹೊರಗೆ ಹೋಗದೇ ವೈದ್ಯರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು, ವೈದ್ಯರ ಮಾತನ್ನು ಮೀರಿದರೆ ಮುಂದೆ ಆಗುವ ಅನಾಹುತಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ ಎಂಬುದಾಗಿ ಹೇಳಿದರು
ಯೂತ್ ರೆಡ್ ಕ್ರಾಸ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ರವಿಶಂಕರ್ ಮಾತನಾಡಿ, ಕಣ್ಣುಗಳು ನಮ್ಮ ದೇಹದ ಅವಿಭಾಜ್ಯ ಅಂಗವಾಗಿದ್ದು, ಕಣ್ಣುಗಳಿಲ್ಲದೆ ಜೀವನ ನಡೆಸುವುದು ತುಂಬಾಕಷ್ಟ, ಈ ನಿಟ್ಟಿನಲ್ಲಿ ಸಾರ್ವಜನಿಕರ ಕಣ್ಣುಗಳ ರಕ್ಷಣೆಗಾಗಿ ನಮ್ಮ ರೆಡ್ ಕ್ರಾಸ್ ಹಾಗೂ ರೋಟರಿ ಸಂಸ್ಥೆಯಿಂದ ಬೆಂಗಳೂರಿನ ಲಯನ್ಸ್ ಐ ಹಾಸ್ಪೆಟಲ್ ನೆರವಿನೊಂದಿಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ,

ಕಣ್ಣಿಗೆ ಶಸ್ತ್ರ ಚಿಕಿತ್ಸೆಗೆ ಒಳಪಡುವ ಶಿಬಿರಾರ್ಥಿಗಳ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ, ಬಿಪಿ, ಶುಗರ್, ಹೃದಯ ತೊಂದರೆ ಕಂಡು ಬಂದಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವುದಿಲ್ಲ, ಏಕೆಂದರೆ ರೋಗಿಗಳ ಸುರಕ್ಷತೆ ವೈದ್ಯರಿಗೆ ಮುಖ್ಯವಾಗಿರುತ್ತದೆ, ಹಾಗಾಗಿ ವೈದ್ಯರು ಶಸ್ತ್ರ ಚಿಕಿತ್ಸೆ ಮುಂದೂಡಿದರೆ ನೀವು ಕೋಪಮಾಡಿಕೊಳ್ಳದೇ ಅವರ ಸೂಚನೆಯಂತೆ ನಡೆದುಕೊಳ್ಳಬೇಕು ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಸುಮಾರು 75 ಜನರಿಗೆ ನೇತ್ರ ತಪಾಸಣೆ ನಡೆಸಿ, 25 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆಗೆ ಬೆಂಗಳೂರಿನ ಲಯನ್ಸ್ ಆಸ್ಪತ್ರೆಗೆ ಹೋಗಲು ಸೂಚನೆ ನೀಡಲಾಗಿದೆ.
ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್, ವೈಸ್ ಚೇರ್ಮನ್ ಎ.ರಾಘವೇಂದ್ರ, ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ಯೂತ್ ರೆಡ್ ಕ್ರಾಸ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ರವಿಶಂಕರ್, ಎಲ್.ಆನಂದಶೆಟ್ಟಿ, ಸಣ್ಣಭೀಮಣ್ಣ, ಪಿ.ಆರ್.ಸತೀಶ್ ಬಾಬು, ನಾಗಸುಂದರಮ್ಮಸುಬ್ಬಣ್ಣಶೆಟ್ಟಿ, ಪಾರ್ವತಮ್ಮ, ಸೌಮ್ಯಸುರೇಶ್, ಶೋಭಾ ನಾಗರಾಜ್, ರೋಟರಿ ಕಾರ್ಯದರ್ಶಿ ವಿಕಾಸ್ ಜೈನ್, ಧನರಾಜ್ ಜೈನ್, ಹೆಚ್.ವೆಂಕಟೇಶ್ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
