
ಹಿರಿಯೂರು :
ಪ್ರತಿವರ್ಷಕ್ಕಿಂತ ಈ ವರ್ಷ ತಾಲ್ಲೂಕಿನಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಬಿಸಿಲಿಗೆ ಹೆದರಿಕೊಂಡು ಜನರು ಮನೆಯಿಂದ ಹೊರಬರಲಾಗದೇ, ಮನೆಯಲ್ಲಿ ಫ್ಯಾನುಗಳ ಬಿಸಿಗಾಳಿಯಲ್ಲಿ ಇರಲೂ ಆಗದೇ ಒದ್ದಾಡುತ್ತಿದ್ದ ಜನರಿಗೆ ವಾಣಿವಿಲಾಸ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನಾಲೆಗಳ ಮೂಲಕ ನೀರು ಹರಿಸುತ್ತಿರುವುದು ಒಂದು ವರದಾನವಾಗಿದೆ.
ಶಾಲಾ ಕಾಲೇಜುಗಳಿಗೆ ಬೇಸಿಗೆರಜೆ ಆರಂಭವಾಗಿದ್ದು, ಪೋಷಕರು ತಮ್ಮ ಮಕ್ಕಳೊಂದಿಗೆ ಬಂದು ನಾಲೆಗಳಿಗೆ ಧುಮುಕಿ, ಈಜಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ, ಚಿಕ್ಕ ಮಕ್ಕಳಿಗೆ ಟ್ಯೂಬ್ ಗಳನ್ನು ಬಳಸಿ, ಮಕ್ಕಳಿಗೆ ಈಜು ಕಲಿಸುತ್ತಿದ್ದಾರೆ, ಬೇಸಿಗೆಯ ತಾಪ ಕಡಿಮೆ ಮಾಡಿಕೊಳ್ಳಲು ನೂರಾರು ಜನರು ನಾಲೆಗಳಲ್ಲಿ ನೀರಾಟ ಆಡುವ ಮೂಲಕ ತಮ್ಮ ದಣಿವಾರಿಸಿಕೊಳ್ಳುತ್ತಿದ್ದಾರೆ.
ವಾಣಿವಿಲಾಸ ನಾಲೆಗಳಲ್ಲಿ ಬೆಳಗ್ಗೆ 8 ಗಂಟೆಗೆ ಉಪಹಾರ ಮುಗಿಸಿ, ಬಂದು ನೀರಿಗೆ ಇಳಿದರೆ ಮಧ್ಯಾಹ್ನದವರೆಗೂ ಈಜಾಡಿ, ಮನೆಯಿಂದ ತಂದ ಬುತ್ತಿಯನ್ನು ಊಟ ಮಾಡಿ, ಮತ್ತೆ ನೀರಿಗೆ ಇಳಿದು ಸಂಜೆಯವರೆಗೂ ನೀರಿನಲ್ಲಿ ಆಟವಾಡುವ ಮೂಲಕ ದಿನದ ಪೂರ್ಣ ಸಮಯವನ್ನು ನಾಲೆಯ ನೀರಿನಲ್ಲೇ ಕಳೆಯುತ್ತಿದ್ದಾರೆ, ಒಟ್ಟಿನಲ್ಲಿ ಬಿರುಬಿಸಿಲಿನ ತಾಪ ಕಡಿಮೆ ಮಾಡಲು ನಾಲೆಗಳಿಗೆ ಹರಿಸಿರುವ ನೀರು ತಾಲ್ಲೂಕಿನ ಜನರಿಗೆ ವರದಾನವಾಗಿದೆ.
