

ಹಿರಿಯೂರು :
ಕರ್ನಾಟಕ ರಾಜ್ಯದ ಬಯಲುಸೀಮೆ,ಮಲೆನಾಡು,ಕರಾವಳಿ,ಕಲ್ಯಾಣ ಕರ್ನಾಟಕ,ಹಳೆ ಮೈಸೂರು ಪ್ರಾಂತ್ಯ ಸೇರಿದಂತೆ 19 ಜಿಲ್ಲೆ 47 ತಾಲ್ಲೂಕುಗಳಲ್ಲಿ 27 ಲಕ್ಷಕ್ಕೂ ಅತ್ಯಧಿಕ ಸಂಖ್ಯೆಯಲ್ಲಿರುವ ಸಮಸ್ತ ಕುಂಚಿಟಿಗರು ಒಗ್ಗಟ್ಟು ಪ್ರದರ್ಶನ ಮಾಡಿ ಇದೇ ಸೆಪ್ಟೆಂಬರ್ 22 ರಿಂದ ಪ್ರಾರಂಭ ಆಗಿರುವ ಜಾತಿಗಣತಿಯಲ್ಲಿ “ಕುಂಚಿಟಿಗ “ಎಂದು ಬರೆಯಿಸಬೇಕು ಎಂಬುದಾಗಿ ಕುಂಚಿಟಿಗ ಹೋರಾಟಗಾರರಾದ ಎಸ್.ವಿ.ರಂಗನಾಥ್ ಅವರು ಹೇಳಿದರು.
ಸುಮಾರು 1928ರಲ್ಲಿ ಮೈಸೂರು ಸರ್ಕಾರ ಹೊರಡಿಸಿದ ಆದೇಶ, ರಾಜ್ಯ ಸರ್ಕಾರ ನಡೆಸಿದ ಕುಲಶಾಸ್ತ್ರೀಯ ಅಧ್ಯಯನ ವರದಿ ಹಾಗೂ ವಿವಿಧ ತಾಲ್ಲೂಕಿನ ತಹಶೀಲ್ದಾರರಿಂದ ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳ ಪ್ರಕಾರ ಕುಂಚಿಟಿಗ ಯಾವುದೇ ಜಾತಿಯ ಉಪಜಾತಿ ಅಲ್ಲ.
ಆದ್ದರಿಂದ ಜಾತಿಕಾಲಂನಲ್ಲಿ ಕುಂಚಿಟಿಗ ಹಾಗೂ ಉಪಜಾತಿ ಕಾಲಂನಲ್ಲಿ ಕುಂಚವಕ್ಕಲ್, ನಾಮಧಾರಿ ಕುಂಚಿಟಿಗ, ಕುಂಚಿಟಿಗಲಿಂಗಾಯಿತ, ರೆಡ್ಡಿ ಕುಂಚಿಟಿಗ, ಕುಂಚಿಟಿಗ ಒಕ್ಕಲಿಗ ಇತ್ಯಾದಿಯಾಗಿ ಬರೆಯಿಸಲು ಸರ್ಕಾರಿ ದಾಖಲೆಗಳ ಸಹಿತ ಮನವಿ ಮಾಡಿದ್ದಾರೆ.
ಈಗಾಗಲೆ ರಾಜ್ಯ ರಾಜಕಾರಣದಲ್ಲಿ ಕುಂಚಿಟಿಗರು ಆಟಕ್ಕುಂಟು ಲಿಕ್ಕಕ್ಕಿಲ್ಲ ಎನ್ನುವಂತೆ ಆಗಿದ್ದೇವೆ. ನಮ್ಮ ಜನಸಂಖ್ಯೆ ಜಾಸ್ತಿ ಬಂದ್ರೆ ನಮಗೆ ಸ್ಥಾನಮಾನ ಸಿಗುತ್ತೆ. ಕುಂಚಿಟಿಗ ಜಾತಿಗೆ ಕೇಂದ್ರ ಸರ್ಕಾರದ ಓ.ಬಿ. ಸಿ.ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಈಗಾಗಲೇ ಶಿಫಾರಸ್ಸು ಮಾಡಿರುವುದರಿಂದ ಎಲ್ಲರು ಕುಂಚಿಟಿಗ ಎಂದು ಬರೆಯಿಸಿದರೆ ಮುಂದೆ ಕೇಂದ್ರ ಸರ್ಕಾರದ ಮೀಸಲಾತಿ ಪಡೆಯಲು ಅನುಕೂಲ ಆಗುತ್ತದೆ .
ಅಲ್ಲದೆ, ಕುಂಚಿಟಿಗ ಕುಲಶಾಸ್ತ್ರೀಯ ಅಧ್ಯಯನ ವರದಿ ಶಿಫಾರಸ್ಸು ಪ್ರಕಾರ ರಾಜ್ಯ ಸರ್ಕಾರದಲ್ಲಿ ಪ್ರವರ್ಗ 1 ರಲ್ಲಿ ಮೀಸಲಾತಿ ಪಡೆಯಲು ಅನುಕೂಲವಾಗುತ್ತದೆ ಎಂಬುದಾಗಿ ಕುಂಚಿಟಿಗ ಕುಲಶಾಸ್ತ್ರೀಯ ಅಧ್ಯಯನಕಾರ ಎಸ್.ವಿ.ರಂಗನಾಥ್ ಹೇಳಿದ್ದಾರೆ.