
ಹಿರಿಯೂರು:
ನಾವು ಸೇವಿಸುವ ಗಾಳಿ, ಕುಡಿಯುವ ನೀರು, ದೇಹದೊಳಗಿನ ರಕ್ತ ಎಲ್ಲಾ ಒಂದೇ ಆಗಿರುವಾಗ ಬಯಸಿ ಪಡೆಯದ ಹುಟ್ಟಿನ ಆಧಾರದ ಮೇಲೆ ಅಸ್ಪೃಶ್ಯತೆ ಆಚರಣೆ ಮಾಡುವುದು ಕಾನೂನು ವಿರೋಧಿ ಮಾತ್ರವಲ್ಲ, ಮಾನವೀಯತೆಯ ವಿರೋಧಿಯೂ ಹೌದು ಎಂಬುದಾಗಿ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಜೆ.ದಿನೇಶ್ ಅವರು ಹೇಳಿದರು.
ತಾಲ್ಲೂಕಿನ ಯರಬಳ್ಳಿ, ಕಂದಿಕೆರೆ ಹಾಗೂ ರಂಗೇನಹಳ್ಳಿಗಳಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕುಪಂಚಾಯಿತಿ, ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಪರಿಶಿಷ್ಟ ಜಾತಿ –ಪಂಗಡದವರ ಮೇಲಿನ ದೌರ್ಜನ್ಯ ತಡೆ ಹಾಗೂ ಅಸ್ಪೃಶ್ಯತೆ ನಿವಾರಣೆ ಕುರಿತು ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹುಟ್ಟು-ಸಾವುಗಳಿಗೆ ಇಲ್ಲದ ಜಾತಿಯ ಸೋಂಕು ಬದುಕಿ ಬಾಳುವಾಗ ಏಕೆ ಬೇಕು. ರಾಷ್ಟ್ರ ಕವಿ ಕುವೆಂಪು ಹೇಳಿರುವ ರೀತಿಯಲ್ಲಿ ನಾವೆಲ್ಲರೂ ವಿಶ್ವಮಾನವರಾಗಬೇಕು. ಅಸ್ಪೃಷ್ಯತೆ ಇಂದಿಗೂ ಜೀವಂತವಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ.ಯಾವದೇವರೂ ಗುಡಿಯೊಳಗೆ ಇಂತಹವರೇ ಬರಬೇಕು , ಪೂಜಿಸಬೇಕು ಎಂದು ಹೇಳುವುದಿಲ್ಲ.
ಮನುಷ್ಯರು ಹಾಕಿಕೊಂಡಿರುವ ಅಮಾನವೀಯ ಕಟ್ಟುಪಾಡುಗಳಿಂದ ಹೊರಬರಬೇಕು. ಜಾತಿಯ ಹೆಸರಿನಲ್ಲಿ ಮೇಲು-ಕೀಳು ಎಂಬ ತಾರತಮ್ಯ ತೊಲಗಿಸಬೇಕು. ಹಳ್ಳಿಗಳಲ್ಲಿ ವಿದ್ಯಾವಂತ ಯುವಕರು ಅಸ್ಪೃಷ್ಯತೆ ವಿರುದ್ಧ ಗಟ್ಟಿ ಧ್ವನಿ ಎತ್ತಬೇಕು ಎಂಬುದಾಗಿ ಅವರು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ವಕೀರಾದ ಆರ್.ಟಿ.ಸತೀಶ್ ಅವರು ಉಪನ್ಯಾಸ ನೀಡಿದರು.ಈ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸಂವಿಧಾನ ರಕ್ಷಣಾ ಸಮಿತಿ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷರಾದ ಕೆ.ರಾಮಚಂದ್ರ, ಪಿ.ಡಿ.ಒ.ಗಳಾದ ಟಿ.ಎಸ್. ಮಂಜುನಾಥ್, ಎಲ್.ವಿ.ಲಕ್ಷ್ಮೀಕಾಂತ್, ಅಬ್ಬಿನಹೊಳೆ ಠಾಣೆ ಪಿ.ಎಸ್.ಐ. ತಿಪ್ಪೇಸ್ವಾಮಿ, ಐಮಂಗಲ ಹೆಡ್ ಕಾನಸ್ಟೇಬಲ್ ಎಂ.ಡಿ.ಮುಬಾರಕ್, ರಾಘವೇಂದ್ರ, ಕಲಾವಿದ ಹಾಗೂ ಪತ್ರಕರ್ತರಾದ ಕೂನಿಕೆರೆಮಾರುತೇಶ್, ಕೆ.ಓಂಕಾರಮೂರ್ತಿ, ಗ್ರಾಮಪಂಚಾಯಿತಿ ಸದಸ್ಯರಾದ ಶಿವಣ್ಣ, ಯರಬಳ್ಳಿ ಶಾಲೆಯ ಶಿಕ್ಷಕರಾದ ಸಂತೋಷ್ ಕುಮಾರ್, ಕಂದಿಕೆರೆ ಶಿಕ್ಷಕ ಲತೇಶ್, ಕಾರ್ಯದರ್ಶಿ ಸಾಯಿಪ್ರಕಾಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
