March 2, 2026
00001

ಹಿರಿಯೂರು :

ತಾಲ್ಲೂಕಿನ ವಾಲ್ಮೀಕಿ ನಾಯಕ ಸಮುದಾಯದ ನಂಜಯ್ಯನಕೊಟ್ಟಿಗೆಯ ಡಿಶ್ ಮಂಜಣ್ಣನವರನ್ನು ಹಿರಿಯೂರು ಗ್ರಾಮಾಂತರ ಸಬ್ ಇನ್ಸ್ ಪೆಕ್ಟರ್ ಆದ ಮಹೇಶ್ ಗೌಡ ರವರು ಹಲ್ಲೆ ಮಾಡಿದ್ದು, ಈ ಬಗ್ಗೆ ಮಾಧ್ಯಮದಲ್ಲಿ ಜಗಜಾಹಿರವಾಗಿ ಪ್ರಸಾರವಾಗಿದ್ದರೂ ಸಹ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳು ಯಾವುದೇ ರೀತಿಯಾದಂತ ಕ್ರಮಕೈಗೊಂಡಿರುವುದಿಲ್ಲ ಎಂಬುದಾಗಿ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡರಾದ ಮಂಜುನಾಥ್ ಹಬ್ಬಿನಹೊಳೆ ಆರೋಪಿಸಿದರು.

ನಗರದ ನಂಜಯ್ಯನಕೊಟ್ಟಿಗೆ ಬಡಾವಣೆಯಲ್ಲಿನ ಮಣಿಕಂಠ ಆಲೋಬ್ರಿಕ್ಸ್ ಕಾರ್ಖಾನೆ ಸಭಾಂಗಣದಲ್ಲಿ ತಾಲೂಕಿನ ವಾಲ್ಮೀಕಿ ನಾಯಕ ಸಮುದಾಯದ ವತಿಯಿಂದ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.

ಮಾಜಿ ಜಿ.ಪಂ.ಸದಸ್ಯ ವದ್ದೀಕೆರೆ ಕಾಂತರಾಜ್ ಮಾತನಾಡಿ, ಈ ಬಗ್ಗೆ ಈಗಾಗಲೇ ಎಸ್.ಪಿ.ಕಚೇರಿಯಲ್ಲಿ ನಮ್ಮ ಸಮುದಾಯದ ನೇತೃತ್ವದಲ್ಲಿ ದೂರು ನೀಡಿರುವುದರ ಜೊತೆಗೆ, ಹಿರಿಯೂರು ಡಿ.ವೈ.ಎಸ್.ಪಿ ರವರಿಗೆ ದೂರು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಈ ಕೂಡಲೇ ಅಧಿಕಾರಿಯ ಮೇಲೆ ಮೊಕದ್ದಮೆ ದಾಖಲಿಸಿ, ಎಫ್.ಐ.ಆರ್ ಮಾಡಬೇಕು ಎಂಬುದಾಗಿ ಒತ್ತಾಯಿಸಿದರು.

ನಾಯಕ ಸಮಾಜದ ಮುಖಂಡ ಆನೆಸಿದ್ರಿ ಪೋಲೀಸ್ ಕೃಷ್ಣಪ್ಪ ಮಾತನಾಡಿ, ನಮ್ಮ ಸಮಾಜದ ಮುಖಂಡ ಡಿಶ್ ಮಂಜುನಾಥ್ ರವರ ಮೇಲೆ ಸಬ್ ಇನ್ಸ್ ಪೆಕ್ಟರ್ ಮಹೇಶ್ ಗೌಡ ವಿನಾಕಾರಣ ಹಲ್ಲೆ ನಡೆಸಿರುವುದು ನಿಜಕ್ಕೂ ಖಂಡನೀಯ ಎಂದರಲ್ಲದೆ, ಈ ಕೂಡಲೇ ಜಿಲ್ಲಾ ವರಿಷ್ಟಾಧಿಕಾರಿಗಳು ಮಹೇಶ್ ಗೌಡ ರವರನ್ನು ಸಸ್ಪೆಂಡ್ ಮಾಡಿ, ಬೇರೆ ಕಡೆ ವರ್ಗಾವಣೆ ಮಾಡಬೇಕು ಎಂಬುದಾಗಿ ಆಗ್ರಹಿಸಿದರು.

ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕ ಮಾಳಿಗೆ ಮಂಜುನಾಥ್ ಮಾತನಾಡಿ, ಈ ಎಲ್ಲಾ ಘಟನೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರ ಗಮನಕ್ಕೆ ತಂದಿದ್ದು, ಈ ಸಭೆ ಮೂಲಕ ಫೆಬ್ರವರಿ 20ರವರೆಗೆ ಗಡುವು ನೀಡಲಾಗಿದೆ, ಇಲ್ಲವಾದಲ್ಲಿ ಈ ಸಬ್ ಇನ್ಸ್ ಪೆಕ್ಟರ್ ಮಹೇಶ್ ಗೌಡರವರ ವಿರುದ್ಧ ವಾಲ್ಮೀಕಿ ಸಮುದಾಯದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಮುಖಂಡ ಮಸ್ಕಲ್ ಶ್ರೀನಿವಾಸ್ ಮಾತನಾಡಿ, ಇಂದಿನ ವಾಲ್ಮೀಕಿ ನಾಯಕ ಸಮುದಾಯದ ಸಭೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳು ಈ ಕುರಿತು ಫೆಬ್ರವರಿ 21ರ ಶನಿವಾರದ ಒಳಗಾಗಿ ಯಾವುದೇ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ವಾಲ್ಮೀಕಿ ಸಮುದಾಯದ ವತಿಯಿಂದ ತಾಲೂಕು ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಎಸ್.ಜೋಗಪ್ಪ, ಜಿ.ಪಂ.ಮಾಜಿ ಸದಸ್ಯೆ ರಾಜೇಶ್ವರಿ,  ತಾ.ಪಂ.ಮಾಜಿ ಸದಸ್ಯ ಅಂಜಿನಪ್ಪ, ಮಾಯಸಂದ್ರ ಮಂಜುನಾಥ್, ಇತರರು ಕಾಂಗ್ರೆಸ್ ಮುಖಂಡ ಮಂಜುನಾಥ್ ರವರ ಮೇಲೆ ನಡೆದ ಅಮಾನುಷ ಹಲ್ಲೆ ಕೃತ್ಯವನ್ನು ಪಕ್ಷಾತೀತವಾಗಿ ಖಂಡಿಸಿ, ಈ ಕೂಡಲೇ ಮಹೇಶ್ ಗೌಡರನ್ನು ಸಸ್ಪೆಂಡ್ ಮಾಡುವಂತೆ ಸಭೆಯಲ್ಲಿ ಒಕ್ಕೊರಲಿನಿಂದ ಒತ್ತಾಯಿಸಿದರು.

ಇಂದಿನ ಸಭೆಯಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರಾದ ಮಂಜುನಾಥ್ ಹಬ್ಬಿನಹೊಳೆ, ವದ್ದೀಕೆರೆ ಕಾಂತರಾಜ್, ಆನೆಸಿದ್ರಿ ಪೋಲೀಸ್ ಕೃಷ್ಣಪ್ಪ, ಮುಖಂಡ ಮಸ್ಕಲ್ ಶ್ರೀನಿವಾಸ್, ದಿವಾಕರ್ ನಾಯಕ, ಸಾಣಿಕೆರೆತಿಪ್ಪೇರುದ್ರಪ್ಪ, ಜೆ.ಬಿ.ರಾಜುಉಪ್ಪಳಗೆರೆ, ತಾ.ಪಂ.ಮಾಜಿಸದಸ್ಯ ಅಂಜಿನಪ್ಪ,  ರಾಮಾಂಜಿನಿಮದಕರಿ, ಲೋಕೇಶಮೇಟಿಕುರ್ಕೆ,  ಗೌರಿಶಂಕರ್ ಬಬ್ಬೂರು, ಕಣ್ಣಪ್ಪನಾಯ್ಕ ಜೆಜಿಹಳ್ಳಿ, ಕಣುಮಣ್ಣಅರಿಶಿಣಗುಂಡಿ, ರಮೇಶ್ ಇದ್ದಿಲನಾಗೇನಹಳ್ಳಿ, ಕರಿಯಣ್ಣ ಇಂಡಸ್ ಕಟ್ಟೆ, ಮಲ್ಲನಾಯಕ ಜೆಜಿಹಳ್ಳಿ, ಕರಿಯಣ್ಣಬಗ್ನಾಡು, ರವಿಸಿದ್ಧನಾಯ್ಕ, ಕಣಜನಹಳ್ಳಿಚಿದಾನಂದ್, ಸೇರಿದಂತೆ ಅನೇಕ ಮುಖಂಡರು  ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *