
ಹಿರಿಯೂರು :
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಈ ದೇಶಕ್ಕೆ ಸಂವಿಧಾನ ಬರೆದು ನಾವೆಲ್ಲರೂ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಉತ್ತಮ ಬದುಕು ಸಾಗಿಸಲು ಅವಕಾಶ ಕಲ್ಪಿಸಿದ್ದು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದ ಅಡಿಯಲ್ಲಿ ಮಹಿಳೆಯರಿಗೆ ಮತದಾನ,ಮಕ್ಕಳಿಗೆ ಶಿಕ್ಷಣ, ಮೂಲಭೂತ ಸೌಕರ್ಯಗಳನ್ನು ಪ್ರತಿಯೊಂದು ಜಾತಿ ಜನಾಂಗದವರಿಗೆ ಮಾಡಿಕೊಟ್ಟಿದ್ದಾರೆ ಎಂಬುದಾಗಿ ಪಂಚಾಯಿತಿ ಅಧಿಕಾರಿಗಳಾದ ಉಷಾರಾಣಿ ಹೇಳಿದರು.
ತಾಲ್ಲೂಕಿನ ಕೂನಿಕೆರೆ ಗ್ರಾಮದಲ್ಲಿ ಕನ್ನಡ ಮತ್ತು ಉರ್ದು ಪ್ರಾಥಮಿಕ ಶಾಲೆ ಗ್ರಾಮ ಪಂಚಾಯಿತಿ ಹಾಗೂ ಮಾನವ ಬಂಧುತ್ವ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮಪಂಚಾಯಿತಿ ಅದು ನಮ್ಮೆಲ್ಲರ ಸ್ವತ್ತು ಹಾಗಾಗಿ ಅದರ ಸ್ವಚ್ಛತೆಯನ್ನು ನಾವೆಲ್ಲರೂ ಮಾಡಿದಾಗ ಮಾತ್ರ ನಮ್ಮ ಗ್ರಾಮ ಶಾಲೆ ಸ್ವಚ್ಛವಾಗಿರುತ್ತದೆ, ಕಸ-ಕಡ್ಡಿಗಳನ್ನು ಎಲ್ಲೆಂದರಲ್ಲಿ ಹಾಕಬಾರದು. ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಬಳಸುವುದು ನಿಲ್ಲಿಸಬೇಕು ಎಂಬುದಾಗಿ ಅವರು ಗ್ರಾಮಸ್ಥರಿಗೆ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೀತಾರಾಮ್ ಮಾತನಾಡಿ, ಡಾ.ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆದು ಅಂಗೀಕರಿಸಿದ ಈ ದಿನ ಗಣರಾಜ್ಯದಿನವನ್ನಾಗಿ ಆಚರಿಸಲು ಆ ಮಹಾತ್ಮನ ಕೊಡುಗೆ ಅಪಾರ, ಹಾಗೆಮುಂಬರುವ ದಿನಗಳಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷೆ ಇರುವುದರಿಂದ ತಾವೆಲ್ಲರೂ ಏಕಾಗ್ರತೆಯಿಂದ ಓದಿ ಈ ಗ್ರಾಮಕ್ಕೆ, ನಿಮ್ಮ ತಂದೆ-ತಾಯಿಗಳಿಗೆ ಕೀರ್ತಿ ತರಬೇಕು ಎಂದರು
ಮಾಜಿ ಅಧ್ಯಕ್ಷರಾದ ಈರಣ್ಣ ಅವರು ಮಾತನಾಡಿ, ಮಕ್ಕಳೇ ನೀವು ಡಾಕ್ಟರ್, ಇಂಜಿನಿಯರ್ ಬೇರೆ ಬೇರೆ ಹುದ್ದೆಗಳಿಗೆ ಹೋಗ್ತೀರಾ ಆದರೆ ಈ ದೇಶಕ್ಕೆ ಉತ್ತಮ ಸೈನಿಕರಾಗಿ ಸೇವೆ ಸಲ್ಲಿಸಲು ವಿದ್ಯಾರ್ಥಿಗಳು ಮುಂದೆ ಬರಬೇಕು, ಈ ಮೂಲಕ ಈ ಊರಿನ ಘನತೆಯನ್ನು ಎತ್ತಿ ಹಿಡಿಯಬೇಕು ಎಂಬುದಾಗಿ ಅವರು ಹೇಳಿದರು.
ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಹೆಚ್.ಎಸ್. ಮಾರುತೇಶ್ ಕೂನಿಕೆರೆ ಮಾತನಾಡಿ, ಈ ದೇಶದಲ್ಲಿ ಜಾತಿ ವ್ಯವಸ್ಥೆ ತೊಲಗಬೇಕಿದೆ. ಹಾಗೆ ಅಂಬೇಡ್ಕರ್ ಅವರ ತತ್ವ- ಸಿದ್ಧಾಂತಗಳನ್ನು ಸಾರುವಂಥಹ ವ್ಯಕ್ತಿಗಳು, ಶಕ್ತಿಗಳು ಈ ನಾಡಿನಲ್ಲಿ ಬರಬೇಕಾಗಿದೆ, ಆಗ ಮಾತ್ರ ದೇಶದ ಪ್ರಗತಿ ಸಾಧ್ಯ,
ಈಗಾಗಲೇ, ಸರ್ಕಾರಿ ಶಾಲೆಗಳು ಬಹುತೇಕ ಮುತ್ತಲ್ಪಡುತ್ತಿವೆ. ಹಾಗಾಗಿ ಸರ್ಕಾರಿ ಶಾಲೆಗಳನ್ನ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು, ಅವರ ಹೋರಾಟ, ಅವರ ಪುಸ್ತಕಗಳನ್ನು ಓದಿ ಹಾಗೆ ನೀವೆಲ್ಲರೂ ಕೂಡ ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಗೋವಿಂದರಾಯ, ಕನ್ನಡ ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ್ , ಉರ್ದು ಶಾಲೆಯ ಮುಖ್ಯೋಪಾಧ್ಯಾಯರಾದ ರಮೇಶ್, ಎಸ್.ಡಿ.ಎಂ.ಸಿ.ಅಧ್ಯಕ್ಷರುಗಳು, ಸದಸ್ಯರುಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಎರಡು ಶಾಲೆಯ ಶಿಕ್ಷಕರುಗಳು, ಅಂಗನವಾಡಿಯ ಶಿಕ್ಷಕರು ಹಾಗೂ ಮಕ್ಕಳು, ಗ್ರಾಮಸ್ಥರು ಉಪಸ್ಥಿತರಿದ್ದರು.

