
ಹಿರಿಯೂರು:
ಸ್ಮಶಾನದಲ್ಲಿ ರಾತ್ರಿ ವೇಳೆ ಇರಲಿ ಹಗಲಲ್ಲೂ ಹೋಗಲು ಹೆದರುವಂತಹ ವಾತಾವರಣವನ್ನು ಮೂಲಭೂತವಾದಿಗಳು ಸೃಷ್ಠಿಸಿದ್ದಾರೆ. ಅಂತಹ ಕಡೆ ಮಧ್ಯರಾತ್ರಿ 12ರಿಂದ ಬೆಳಗಿನ ಜಾವ 3ರವರೆಗೆ ಕವಿಗೋಷ್ಠಿ ನಡೆಸಿ ರಾಷ್ಟ್ರ ಕವಿ ಕುವೆಂಪು ಅವರ ವೈಚಾರಿಕತೆಗೆ ಸಲ್ಲಿಸುವ ಗೌರವವಾಗಿದೆ ಎಂಬುದಾಗಿ ವಕೀಲರಾದ ಪಿ.ಆರ್.ದಾಸ್ ಅವರು ಹೇಳಿದರು.
ನಗರದ ಹುಳಿಯಾರು ರಸ್ತೆಯಲ್ಲಿರುವ ನಂಜಯ್ಯನಕೊಟ್ಟಿಗೆ ಬಡಾವಣೆಯ ಸ್ಮಶಾನದಲ್ಲಿ ಸೋಮವಾರ ತಡರಾತ್ರಿ ವಿಶ್ವ ಕನ್ನಡ ಕಲಾ ಸಂಸ್ಥೆ ಹಾಗೂ ಕುವೆಂಪು ಗೆಳೆಯರ ಬಳಗದ ವತಿಯಿಂದ ಕುವೆಂಪು ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಮಶಾನ ಎಂದಾಕ್ಷಣ, ಅಲ್ಲಿ ಭೂತ ಪ್ರೇತ್ರಗಳು ನೆಲೆಸಿರುತ್ತವೆ. ಮಧ್ಯರಾತ್ರಿಯ ನಂತರ ಅವುಗಳ ಸಾಮ್ರಾಜ್ಯ ಆರಂಭವಾಗುತ್ತದೆ. ಮನುಷ್ಯರು ಅಲ್ಲಿಗೆ ಹೋದರೆ ಅವರ ಕತೆ ಮುಗಿದಂತೆ ಎಂಬರ್ಥದ ಕಥೆಗಳು ಲೆಕ್ಕವಿಲ್ಲದಷ್ಟು ಸಿಗುತ್ತವೆ. ಹೀಗಾಗಿ ಹಗಲು ವೇಳೆಯಲ್ಲಿಯೂ ಸ್ಮಶಾನದ ಸುತ್ತ ಮುತ್ತ ತಿರುಗಾಡಲು ಜನರು ಹೆದರುವ ಮನಸ್ಥಿತಿ ಇಂದಿಗೂ ಇದೆ.
ನಿಜವಾದ ಅರ್ಥದಲ್ಲಿ ಸ್ಮಶಾನವೇ ಮನುಷ್ಯನನಿಜವಾದ ವಾಸಸ್ಥಾನ. ಇಂತಹ ವಿಭನ್ನ ಕಾರ್ಯಕ್ರಮದ ಮೂಲಕ ಸ್ಮಶಾನದ ಬಗೆಗಿನ ಭೀತಿಯನ್ನು ಹೋಗಲಾಡಿಸುವ ಕೆಲಸ ಮಾಡಿರುವುದು ಕುವೆಂಪು ಅವರಿಗೆ ನಾವು ಸಲ್ಲಿಸುವ ಗೌರರವಾಗಿದೆ ಎಂಬುದಾಗಿ ಅವರು ಅಭಿಪ್ರಾಯಪಟ್ಟರು.

ವಿಶ್ವ ಕನ್ನಡ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಈ.ರವೀಶ ಅಕ್ಕರ ಅವರು ಮಾತನಾಡಿ ಕುವೆಂಪು ಸಮಾಧಿ ಸ್ಥಳವಾದ ಕವಿಶೈಲದಲ್ಲಿ ಮಾಡಿತ್ತು. ವೈಚಾರಿಕತೆಗೆ ಹೆಸರಾದ ಕುವೆಂಪು ಜನ್ಮದಿನವನ್ನು ಈ ಬಾರಿ ಸ್ಮಶಾನದಲ್ಲಿ ಆಯೋಜಿಸಿ ಜನರಲ್ಲಿನ ಸ್ಮಶಾನ ಭಯವನ್ನು ಹೋಗಲಾಡಿಸುವ ಯತ್ನ ಮಾಡಿದೆ ಎಂಬುದಾಗಿ ಅವರು ಹೇಳಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷರಾದ ೆಸ್.ಹೆಚ್. ಷಫೀವುಲ್ಲಾ, ಉಪನ್ಯಾಸಕ ಅನಿಲ್ ಕುಮಾರ್, ಆಕಾಶವಾಣಿ ಸಂದರ್ಶಕ ನಿರೂಪಕರಾದ ನವೀನ್ ಮಸ್ಕಲ್ ಅವರು ಮಾತನಾಡಿದರು.
ಈ ಕವಿಗೋಷ್ಠಿಯಲ್ಲಿ ಚಿತ್ರದುರ್ಗ, ತುಮಕೂರು, ಮೈಸೂರು, ಕೊಪ್ಪಳ ಜಿಲ್ಲೆಗಳಿಂದ ಆಗಮಿಸಿದ್ದ 25ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.ಈ ಕಾರ್ಯಕ್ರಮದಲ್ಲಿ ಶಾರದಾಜೈರಾಮ್, ಗಿರಿಜಾ, ಸಮುದ್ರದಳ್ಳಿ ರಂಗಧಾಮ, ವೇಣುಕುಮಾರ್, ಪರಂಪರ, ಶಿವಮೂರ್ತಿಕೋಡಿಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
