October 6, 2025
000001

ಹಿರಿಯೂರು :

ನಗರದ ಯುವಜನರು ಮತ್ತು ಶಾಲಾ ಮಕ್ಕಳನ್ನು ಕ್ರೀಡೆಯತ್ತ ಆಕರ್ಷಿಸಲು ದೇಶದಲ್ಲಿ ಪ್ರತಿವರ್ಷ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂಬುದಾಗಿ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ಮೊಹಮ್ಮದ್ ಫಕ್ರುದ್ದೀನ್ ಹೇಳಿದರು.

ನಗರದ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೇರಾ ಯುವ ಭಾರತ್ ಚಿತ್ರದುರ್ಗ, ಕಳವಿಭಾಗಿ ಶ್ರೀರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾಸಂಘ ಸಕ್ಕರ ಹಾಗೂ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾಪಟು ಧ್ಯಾನ್ ಚಂದ್ ರವರ ಮಹಾನ್ ಸಾಧನೆಗೆ ಗೌರವ ಸಲ್ಲಿಸುವ ಸಲುವಾಗಿ ಭಾರತ ಸರ್ಕಾರ 2012ರಲ್ಲಿ ಧ್ಯಾನ್ ಚಂದ್ರ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಘೋಷಿಸಿತು. ಕ್ರೀಡೆಯ ಮೌಲ್ಯಗಳ ಅರಿವು ಮೂಡಿಸಲು ವಿಶ್ವಮಟ್ಟದಲ್ಲಿ ಕ್ರೀಡೆಯ ಮಹತ್ವ ಸಾರಲು ಇದು ಅಗತ್ಯವಾಗಿದೆ ಎಂದರಲ್ಲದೆ,

ನಮ್ಮ ಆರೋಗ್ಯ ಸುರಕ್ಷತೆ ಹಾಗೂ ದೈಹಿಕ, ಮಾನಸಿಕ, ಬೌದ್ಧಿಕ, ಬೆಳವಣಿಗೆಗೆ ಕ್ರೀಡೆಗಳು ಅಗತ್ಯವಾಗಿದ್ದು, ಈ ಕ್ರೀಡೆಯಲ್ಲಿ ದೇಶದ ಘನತೆ ಗೌರವವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಕೀರ್ತಿ ಧ್ಯಾನ್ ಚಂದ್ ಅವರಿಗೆ ಸಲ್ಲುತ್ತದೆ ಎಂಬುದಾಗಿ ಅವರು ಹೇಳಿದರು.

ಸ್ವಾಮಿ ವಿವೇಕಾನಂದ ರಾಜ್ಯ ಯುವಪ್ರಶಸ್ತಿ ಪುರಸ್ಕೃತರಾದ ಎಸ್.ಸಿ.ರಂಗಸ್ವಾಮಿಸಕ್ಕರ ಮಾತನಾಡಿ, ಮೇಜರ್ ಧ್ಯಾನ್ ಚಂದ್ ರವರು ಭಾರತವನ್ನು ಕ್ರೀಡೆಯಲ್ಲಿ ಮುನ್ನಡೆಸಿದ ಮಾಂತ್ರಿಕ ಈ ನಿಟ್ಟಿನಲ್ಲಿ ಯುವಶಕ್ತಿಯನ್ನು ಕ್ರೀಡೆಯಾಗಿ ಪರಿಚಯಿಸಿದ ಭಾರತ ಸರ್ಕಾರ ಕ್ರೀಡಾಪಟುಗಳಿಗೆ ಮತ್ತು ಕ್ರೀಡೆ ತರಬೇತುದಾರರಿಗೆ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಹಾಗೂ ಅರ್ಜುನ್ ಪ್ರಶಸ್ತಿ ನೀಡಿ ಗೌರವಿಸಿ ಗೌರವಿಸುತ್ತದೆ, ರಾಷ್ಟ್ರಮಟ್ಟದಲ್ಲಿ ಭಾರತದ ಕ್ರೀಡೆಯನ್ನು ಪರಿಚಯಿಸುವುದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಉದ್ದೇಶವಾಗಿದೆ ಎಂಬುದಾಗಿ ಹೇಳಿದರು.

ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಜೆ.ನಿಜಲಿಂಗಪ್ಪ ಮಾತನಾಡಿ, ಮೇಜರ್ ಧ್ಯಾನ್ ಚಂದ್ ಅವರು ಅಲಹಾಬಾದ್ ನಲ್ಲಿ 1905 ಆಗಸ್ಟ್ 29ರಂದು ಜನಿಸಿದರು, 1922 ರಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿ ರೆಜಿಮೆಂಟ್ ಸ್ಕ್ವಾಡ್ ಸೇರುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು,

1928, 1932, ಹಾಗೂ 1936ರಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಹಾಕಿಯ ಒಲಿಂಪಿಕ್ ನಲ್ಲಿ ಚಿನ್ನದ ಪದಕವನ್ನು ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು, ಇವರ ಕ್ರೀಡಾ ಸಾಧನೆಯನ್ನು ಮೆಚ್ಚಿ ಇವರ ಹೆಸರಿನಲ್ಲಿ ಭಾರತ ಸರ್ಕಾರ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಕ್ರೀಡಾಪಟುಗಳಿಗೆ ನೀಡುತ್ತಾ ಬಂದಿರುವುದು ಅನನ್ಯವಾಗಿದೆ ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಪಟುಗಳಾದ ಕೆ.ವಿಜಯ್ ಕುಮಾರ್, ಟಿ.ಕೆ.ರಂಗನಾಥ್, ಕೆ.ಗೋವಿಂದರಾಜು ಇವರುಗಳನ್ನು ಸನ್ಮಾನಿಸಲಾಯಿತು. 100 ಮೀಟರ್ ಓಟದ ಸ್ಪರ್ಧೆ, ಶಟಲ್ ಕಾಕ್ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಿ.ಆರ್.ಹನುಮಂತರಾಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ರೀಡಾ ಸಂಚಾಲಕರಾದ ಡಾ.ಅಣ್ಣಪ್ಪಸ್ವಾಮಿ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಆರ್.ಪುಷ್ಪಲತಾ, ವಿ.ಕೆ.ಮಧುಸೂಧನ್, ಐಕ್ಯೂ ಎಸಿ ಸಂಚಾಲಕರಾದ ನಾಗರಾಜು, ಡಾ.ಧನಂಜಯ, ಬಸವರಾಜು, ಚೈತ್ರ, ನೀತುರಾಜುನಾಯ್ಕ, ಶ್ರೀಮತಿ ಶಿವಲೀಲಾ ಹಾಗೂ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *