ಹಿರಿಯೂರು :

ಗಣೇಶ ಚತುರ್ಥಿಯ ನಂತರದ ದಿನವಾದ ಭಾದ್ರಪದ ಮಾಸದ ಪಂಚಮಿಯ ದಿನದಂದು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಸಂಪ್ರದಾಯದಂತೆ, ಜೋಕುಮಾರಸ್ವಾಮಿಯನ್ನು ಪೂಜಿಸುವ ಪ್ರತೀತಿಯಿದ್ದು, ನಗರದ ಮನೆಮನೆಗಳಿಗೆ ಗಂಗಾಮತಸ್ತರು ಬುಟ್ಟಿಯಲ್ಲಿ ಹೊತ್ತು ತರುವ ಪಾರ್ವತಿ ಪುತ್ರ ಜೋಕುಮಾರಸ್ವಾಮಿ ದೇವರನ್ನು ಮನೆಯ ಗೃಹಿಣಿಯರು ವಿವಿಧ ಹೂಗಳಿಂದ ಸಿಂಗರಿಸಿ, ಪೂಜಿಸಿ ಆಶೀರ್ವಾದ ಪಡೆದರು.

ಪಾರ್ವತಿ ಪುತ್ರ ಜೋಕುಮಾರಸ್ವಾಮಿಯನ್ನು ಆರಾಧಿಸಿದರೆ ಊರಿನಲ್ಲಿ ಮಳೆ-ಬೆಳೆ ಸಮೃದ್ಧವಾಗಿ, ಜನರು ಸುಭಿಕ್ಷವಾಗಿರುವರೆಂಬ ನಂಬಿಕೆ ಹಿಂದಿನಿಂದಲೂ ಜನರಲ್ಲಿ ಇದ್ದು, ಅದಕ್ಕಾಗಿ ಊರಿನಲ್ಲಿ ಈ ಜೋಕುಮಾರಸ್ವಾಮಿಯನ್ನು ಪ್ರತಿವರ್ಷವೂ ಗಣೇಶ ಹಬ್ಬದ ಮರುದಿನ ಭಕ್ತಿಭಾವದಿಂದ ಆರಾಧಿಸುತ್ತಾರೆ.

ಮಹಿಳೆಯರು ಪುಟ್ಟಿಗಳಲ್ಲಿ ಜೋಕುಮಾರಸ್ವಾಮಿಯನ್ನು ಪ್ರತಿಷ್ಠಾಪಿಸಿ ತಲೆಯ ಮೇಲೆ ಬುಟ್ಟಿಯನ್ನು ಹೊತ್ತು ಮನೆಮನೆಗೆ ಹೋಗಿ ಜೋಕುಮಾರಸ್ಮಾಮಿಯ ಪದಗಳನ್ನು ಹಾಡುವ ಮೂಲಕ ಭಕ್ತರ ಮನಸಂತೋಷಗೊಳಿಸಿ, ಭಕ್ತರ ಮನೆಗಳಲ್ಲಿ ನೀಡುವ ಅಕ್ಕಿ, ಬೇಳೆ, ಬೆಲ್ಲ, ತೆಂಗಿನಕಾಯಿ, ಕಾಣಿಕೆಗಳನ್ನು ಪಡೆಯುವರು. ಬುಟ್ಟಿಯಲ್ಲಿ ಹೊತ್ತು ತಂದ ಜೋಕುಮಾರಸ್ವಾಮಿಗೆ ನಾರಿಯರು ಭಕ್ತಿಭಾವದಿಂದ ದವಸಧಾನ್ಯಗಳನ್ನು ಅರ್ಪಿಸುವ ಮೂಲಕ ಪೂಜೆ ಸಲ್ಲಿಸುವರು.

