March 3, 2026
000001

ಹಿರಿಯೂರು :

ಬಡತನ, ರೋಗ ಮತ್ತು ಸರ್ಕಾರಿ ಸೌಲಭ್ಯಗಳ ಕೊರತೆಯ ನಡುವೆ ನಲುಗುತ್ತಿರುವ ಬೋವಿ ಸಮುದಾಯದ ಒಂದು ಕುಟುಂಬದ ಪರಿಸ್ಥಿತಿಯು ಮನಕಲಕುವಂತಿದೆ. ಇಲ್ಲಿನ ಆದಿವಾಲಬೋವಿ ಕಾಲೋನಿಯ ನಿವಾಸಿಗಳಾದ ಜಯರಾಮ್ ಮತ್ತು ರತ್ನಮ್ಮ ದಂಪತಿಯ ಮೂವರು ಮಕ್ಕಳಿಗೆ ಹುಟ್ಟಿನಿಂದಲೇ ಬುದ್ಧಿಮಾಂದ್ಯತೆ ಮತ್ತು ವಿಕಲಚೇತನತೆಯ ದೋಷ ಆವರಿಸಿದ್ದು, ಕಳೆದ ಐದು ವರ್ಷಗಳ ಹಿಂದೆ ಇವರ ಮೊದಲ ಮಗಳು, 17 ವರ್ಷದ ಚಿನ್ನಮ್ಮ ಮೃತಪಟ್ಟಿದ್ದಾರೆ.

ಈಗ ಮನೆಯಲ್ಲಿ ಉಳಿದಿರುವ ಇಬ್ಬರು ಮಕ್ಕಳ ಪರಿಸ್ಥಿತಿ ವಿಚಿತ್ರವಾಗಿದೆ. ಗೋವಿಂದರಾಜ್ (16) ಈತನು ತೀವ್ರ ಬುದ್ಧಿಮಾಂದ್ಯ ಮತ್ತು ವಿಕಲಚೇತನನಾಗಿದ್ದು, ಕಣ್ಣು ಕಂಡರೂ ಯಾರನ್ನೂ ಗುರುತು ಹಿಡಿಯುವುದಿಲ್ಲ. ನೆಲದ ಮೇಲೆ ಎದ್ದು ಕುಳಿತುಕೊಳ್ಳಲು ಕೂಡ ಸಾಧ್ಯವಿಲ್ಲದೆ  ಮಲಗಿದ ಜಾಗದಲ್ಲಿಯೇ ಮಲ-ಮೂತ್ರ ವಿಸರ್ಜನೆ ಮಾಡುತ್ತಾನೆ.

ಅಮೃತ (13) ಈಕೆಯೂ ಬುದ್ಧಿಮಾಂದ್ಯಳಾಗಿದ್ದು, ಮಾತು ಕೂಡ ಬರುವುದಿಲ್ಲ. ಇವಳ ಪರಿಸ್ಥಿತಿಯೂ ಗೋವಿಂದರಾಜ್ ಅವರಂತೆಯೇ ಇದ್ದು, ಕುಳಿತಲ್ಲೇ ಮಲ-ಮೂತ್ರ ವಿಸರ್ಜನೆ ಮಾಡುವುದರಿಂದ ತಾಯಿ ರತ್ನಮ್ಮ ಅವರಿಗೆ ಮಕ್ಕಳ ಆರೈಕೆಯೇ ದಿನದ ದೊಡ್ಡ ಹೊರೆಯಾಗಿದೆ.

ಕೂಲಿ ಮಾಡಿ ದಿನ ಸಾಗಿಸಬೇಕಾದ ಜಯರಾಮ್ ಮತ್ತು ರತ್ನಮ್ಮ ದಂಪತಿಗಳಿಗೆ ಪ್ರತಿನಿತ್ಯಈ ಮಕ್ಕಳನ್ನು ನಿಭಾಯಿಸುವುದು ದೊಡ್ಡ ಹೊರೆಯಾಗಿ ಪರಿಣಮಿಸಿದೆ. “ದಿನಗೂಲಿಬಿಟ್ಟು ಮಕ್ಕಳನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಮಕ್ಕಳು ನೋವಿನಿಂದ ಅಳುತ್ತಿದ್ದರೂ ಅವರಿಗೆ ಮಾತು ಬಾರದಿರುವ ಕಾರಣ ನಮಗೆ ತಿಳಿಯುವುದಿಲ್ಲ,” ಎಂಬುದಾಗಿ ತಾಯಿ ರತ್ನಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.

ದಂಪತಿಗೆ ಯಾವುದೇ ಜಮೀನು ಇರುವುದಿಲ್ಲ. ಮನೆ ಇದ್ದರೂ ಮಳೆಗಾಲದಲ್ಲಿ ಸೋರುತ್ತದೆ. ‘ನೆರೆಹೊರೆಯ ಮಕ್ಕಳಂತೆ ನಮ್ಮ ಮಕ್ಕಳು ಶಾಲೆಗೆ ಹೋಗುತ್ತಾರೆ’ ಎಂಬ ನಮ್ಮ ಕನಸು ಭಗ್ನವಾಗಿದೆ. ಚಿಕಿತ್ಸೆಗೆ ತಗಲುವ ದುಬಾರಿ ಖರ್ಚುಗಳನ್ನು ಕೂಲಿ ಮಾಡಿ ಬದುಕುವ ನಾವು ಎಲ್ಲಿಂದ ಜೋಡಿಸುವುದು ಎಂದು ಜಯರಾಮ್ ಅವರು ಆಳವಾದ ಸಂಕಷ್ಟವನ್ನು ವ್ಯಕ್ತಪಡಿಸಿದರು.

ಈ ಬಡ ಕುಟುಂಬವು ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿದೆ. ಕೆಲವು ವರ್ಷಗಳ ಹಿಂದೆ ವಿಕಲಚೇತನರ ಮಾಸಿಕ ಪಿಂಚಣಿ ಬರುತ್ತಿದ್ದರೂ, ಕಳೆದ ಎರಡು ವರ್ಷಗಳಿಂದ ಹೆಬ್ಬೆಟ್ಟು ಅಪ್ಡೇಟ್ ಆಗಿಲ್ಲ ಎಂಬ ಕಾರಣ ನೀಡಿ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ. ಪಡಿತರ ಕೂಡ ಸಿಗುತ್ತಿರಲಿಲ್ಲ.

ಇತ್ತೀಚೆಗೆ 6ತಿಂಗಳಿಂದ ತಲಾ 10 ಕೆಜಿ ಅಕ್ಕಿ ನೀಡುತ್ತಿರುವುದನ್ನು ಹೊರತುಪಡಿಸಿದರೆ, ಯಾವುದೇ ಸೌಲಭ್ಯಗಳು ಈವರೆಗೆ ಇವರಿಗೆ ದೊರೆತಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ ಮತ್ತು ವಿಕಲಚೇತನರ ಇಲಾಖೆ ತಮ್ಮ ಮನವಿಗೆ ಸ್ಪಂದಿಸಿಲ್ಲ ಎಂಬುದಾಗಿ  ದಂಪತಿಗಳು ದೂರಿದ್ದಾರೆ.

ಹಿಂದೊಮ್ಮೆ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕರಾದ ಡಿ.ಸುಧಾಕರ್ ಅವರು ಒಂದಷ್ಟು ಹಣಕಾಸಿನ ನೆರವು ನೀಡಿ, ಅಧಿಕಾರಿಗಳಿಗೆ ಸೂಕ್ತ ಗಮನ ಹರಿಸುವಂತೆ ಸೂಚಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂಬುದಾಗಿ  ಅವರು ಮಾಧ್ಯಮಗಳ ಮೂಲಕ ತಮ್ಮ ಸಂಕಷ್ಟವನ್ನು ಹೇಳಿಕೊಂಡರು.

ಈ ಕುಟುಂಬದ ಬಡತನದ ಬಗ್ಗೆ ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಹಿರಿಯೂರು ತಾಲ್ಲೂಕು ತಹಶೀಲ್ದಾರ ಮತ್ತು ಆರೋಗ್ಯ ಅಧಿಕಾರಿಗಳು ಜಯರಾಮ್ ಅವರ ಮನೆಗೆ ಭೇಟಿ ನೀಡಿ, ಮಕ್ಕಳ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಮುಂದಿನ ದಿನಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಆರೋಗ್ಯ ಸೇವೆ ಮತ್ತು ಪಿಂಚಣಿ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸುವ ಭರವಸೆಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಬುದ್ಧಿಮಾಂಧ್ಯ ವಿಕಲಚೇತನ ಮಕ್ಕಳ ಬದುಕಿಗೆ ನೆರವು ನೀಡಬಹುದೆಂಬ ನಿರೀಕ್ಷೆ ಇದೀಗ ಕುಟುಂಸ್ಥರಲ್ಲಿ ಮನೆ ಮಾಡಿದೆ.

About The Author

Leave a Reply

Your email address will not be published. Required fields are marked *