
ಹಿರಿಯೂರು:
ತಾಲ್ಲೂಕಿನ ಬಬ್ಬೂರುಫಾರಂ ಸಮೀಪದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಧನ-ಧಾನ್ಯ ಯೋಜನೆ ಕಾರ್ಯಕ್ರಮಕ್ಕೆ ರೈತರನ್ನು ಅಹ್ವಾನಿಸದೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂಬುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಅವರು ಒತ್ತಾಯಿಸಿದ್ದಾರೆ.
ಧನ-ಧಾನ್ಯ ಯೋಜನೆಗೆ ದೇಶದಲ್ಲಿ ಆಯ್ಕೆ ಮಾಡಿರುವ 100 ಜಿಲ್ಲೆಗಳಲ್ಲಿ ಚಿತ್ರದುರ್ಗ ಜಿಲ್ಲೆ ಸೇರಿರುವುದು ಸಂತೋಷದ ವಿಚಾರ. ರೈತರ ಅಭಿವೃದ್ಧಿಗೆಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯ ಉದ್ಘಾಟನೆಯನ್ನು ರೈತರನ್ನು ಅಹ್ವಾನಿಸದೆ ಆಯೋಜಿಸಿರುವುದು ಅಧಿಕಾರಿಗಳಲ್ಲಿನ ಬೇಜವಬ್ದಾರಿತನಕ್ಕೆ ನಿದರ್ಶನವಾಗಲಿದೆ. ಎಂದರಲ್ಲದೆ,
ಇಂತಹ ಮಹತ್ವದ ಕಾರ್ಯಕ್ರಮವನ್ನು ಕೇವಲ ರಾಜಕೀಯ ಪಕ್ಷದವರ ಕಾರ್ಯಕ್ರಮದಂತೆ ಆಯೋಜಿಸಿರುವುದು ಖಂಡನೀಯ ಎಂಬುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಕಾರ್ಯಕ್ರಮ ಆಯೋಜಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ತೋಟಗಾರಿಕೆ ಮಹಾವಿದ್ಯಾಲಯದ ಸಂಶೋಧನಾ ಕೇಂದ್ರದ ಮುಂಭಾಗದಲ್ಲಿ ರೈತ ಸಂಘದ ನೇತೃತ್ವದಲ್ಲಿ ಚಳುವಳಿ ನಡೆಸುತ್ತೇವೆ ಎಂಬುದಾಗಿ ಅವರು ತಿಳಿಸಿದ್ದಾರೆ.

