

ಹಿರಿಯೂರು:
ನಗರ ವ್ಯಾಪ್ತಿಯ ಡಾ||ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ನಗರಸಭೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಡಿ.ಸಣ್ಣಪ್ಪರವರು ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ನಿಲಯದ ಅಡುಗೆ ಕೋಣೆಗೆ ಭೇಟಿ ನೀಡಿ, ವೀಕ್ಷಣೆ ನಡೆಸಿದ ಇವರು, ಕೋಣೆಯಲ್ಲಿ ಸ್ವಚ್ಛತೆ ಇಲ್ಲದಿರುವುದು, ಆಹಾರದ ಗುಣಮಟ್ಟ ತೀವ್ರ ಕಡಿಮೆ ಮಟ್ಟದಲ್ಲಿರುವುದು ಹಾಗೂ ನೀರಿನ ಸಂಪು ಬಹಳ ದಿನಗಳಿಂದ ಸ್ವಚ್ಛತೆ ಮಾಡದೆ ಕೊಳಕಾಗಿರುವುದನ್ನು ವೀಕ್ಷಿಸಿ, ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ವಿದ್ಯಾರ್ಥಿಗಳಿಗೆ 2021-22ನೇ ಸಾಲಿನ ಪುಸ್ತಕಗಳು ಮಾತ್ರ ಲಭ್ಯವಿದ್ದು, ಉಪಹಾರದ ಗುಣಮಟ್ಟತೆ ಇಲ್ಲದಿರುವುದು ಮತ್ತು ಸ್ವಚ್ಛತೆ ಹಾಗೂ ಅಶುದ್ಧತೆ ನೀರಿನ ಬಗ್ಗೆ ಹಾಗೂ ವಿದ್ಯಾರ್ಥಿ ನಿಲಯದಲ್ಲಿರುವ ಇನ್ನಿತರೆ ಸಮಸ್ಯೆಗಳ ಕುರಿತು ಸ್ಥಾಯಿ ಸಮಿತಿ ಅಧ್ಯಕ್ಷರು ತೀವ್ರ ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಸಂಧ್ಯಾ, ಹೆಚ್.ಟಿ.ಸುನೀಲ್ ಕುಮಾರ್, ವೈ.ಎಸ್.ಅಶೋಕ್ ಕುಮಾರ್, ಎಸ್.ಮಹಾಲಿಂಗರಾಜು, ನಯಾಜ್ ಶರೀಫ್ ಮತ್ತು ದಫೇದಾರ್ ಗಳು ಸೇರಿದಂತೆ ವಿದ್ಯಾರ್ಥಿನಿಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.