May 2, 2026
00001

ಹಿರಿಯೂರು :

ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕಿಲಾರದಹಳ್ಳಿ ಗ್ರಾಮದಲ್ಲಿ ಬೇಸಿಗೆಯ ಬಿಸಿಲು ಏರುತ್ತಿದ್ದಂತೆ ಗ್ರಾಮದ ಪ್ರಮುಖ ನೀರಿನ ಮೂಲಗಳು ಬತ್ತಿ ಹೋಗಿದ್ದು, ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ, ಗ್ರಾಮಸ್ಥರು ಹನಿ ನೀರಿಗೂ ಸಹ ಪರದಾಡುವಂತಾಗಿದೆ ಎಂಬುದಾಗಿ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಸಮರ್ಪಕವಾಗಿ ನೀರು ಪೂರೈಕೆಯಾಗದ ಕಾರಣ, ಮಹಿಳೆಯರು ಮತ್ತು ಮಕ್ಕಳು ಕಿಲೋಮೀಟರ್‌ಗಟ್ಟಲೆ ದೂರ ನಡೆದು ತೋಟದ ಮನೆಗಳಿಂದ ಅಥವಾ ಖಾಸಗಿ ಬೋರ್‌ ವೆಲ್‌ಗಳಿಂದ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 60 ದಿನಗಳಿಂದ ಗ್ರಾಮದಲ್ಲಿ ನಿಯಮಿತವಾಗಿ ನೀರು ಸರಬರಾಜಾಗುತ್ತಿಲ್ಲ.

​ಪಂಚಾಯತ್ ವತಿಯಿಂದ ಪರ್ಯಾಯ ವ್ಯವಸ್ಥೆ (ಟ್ಯಾಂಕರ್ ಮೂಲಕ ನೀರು) ಕಲ್ಪಿಸುವಲ್ಲಿ ವಿಳಂಬವಾಗುತ್ತಿದೆ. ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. “ನೀರಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ,” ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಈ ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತ ಎಚ್ಚೆತ್ತುಕೊಂಡು, ಕಿಲಾರದಹಳ್ಳಿ ಗ್ರಾಮಕ್ಕೆ ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

About The Author

Leave a Reply

Your email address will not be published. Required fields are marked *