April 21, 2026
000003

ಹಿರಿಯೂರು:     

ವಿಶ್ವಕಂಡ  ಮಹಾನ್ ಮಾನವತಾವಾದಿ ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಸ್ಥಾಪಿಸಿದ್ದ ಅನುಭವ ಮಂಟಪದಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರಿಗೂ ಅವಕಾಶ ಕಲ್ಪಿಸಿದಂತಹ ಮಹಾನ್ ಚೇತನ ಎಂಬುದಾಗಿ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷೆ ಎನ್.ಯಶೋದಮ್ಮ ಹೇಳಿದರು.

ನಗರದ ನಿವೃತ್ತ ನೌಕರರ ಸಭಾಭವನದಲ್ಲಿ ಶ್ರೀ ಜ್ಯೋತಿ ಸ್ವರೂಪಿಣಿ ಮಹಿಳಾ ಲಲಿತ ಕಲಾಸಂಘ ಕೆ.ಎಂ.ಕೊಟ್ಟಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು. ಇವರುಗಳ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿಯ ಅಂಗವಾಗಿ ಬಸವಾದಿ ಶರಣರು ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ಆಯೋಜಿಸಿದ್ದ ಚಿಂತನ ಮಂಥನ ಹಾಗೂ ಸಾಂಸ್ಕೃತಿಕ  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

                        

ಜಾತಿ ಹಾಗೂ ವರ್ಗದ ಹೆಸರಿನಲ್ಲಿ ಹರಿದು ಹಂಚಿ ಹೋಗಿದ್ದ ಸಮಾಜವನ್ನು ಜಾತಿ ರಹಿತ ಹಾಗೂ ವರ್ಗ ರಹಿತ ಸಮಾಜವನ್ನಾಗಿ ನಿರ್ಮಾಣ ಮಾಡುವುದೇ ಬಸವಣ್ಣನವರ ಮುಖ್ಯ ಗುರಿಯಾಗಿತ್ತು, ಈ ನಿಟ್ಟಿನಲ್ಲಿ ಅವರ ಹೋರಾಟ ಕ್ರಾಂತಿಕಾರಕವಾಗಿತ್ತು, ಅಂತರ್ಜಾತಿಯ ವಿವಾಹಕ್ಕೆ ಅಡಿಗಲ್ಲು ಹಾಕಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು ಎಂಬುದಾಗಿ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಎಸ್.ಜಿ.ರಂಗಸ್ವಾಮಿಸಕ್ಕರ ಮಾತನಾಡಿ, ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿಯೇ ಈ ನಾಡಿನಲ್ಲಿ ಸಮಾನತೆಗಾಗಿ ಸಮಾಜವನ್ನು ಒಗ್ಗೂಡಿಸಲು ಕ್ರಾಂತಿಕಾರಕ ಹೆಜ್ಜೆಯನ್ನು ಇಟ್ಟವರು, ಜಾತಿ, ಮತ, ಪಂಥ ಭೇದವಿಲ್ಲದೆ ಎಲ್ಲರೂ ಒಂದೇ ಎನ್ನುವ ತತ್ವವನ್ನು ಸಾರಿದವರು ಎಂದರಲ್ಲದೆ, 

ಈ ಸಮಾಜದಲ್ಲಿ ಎಲ್ಲರೂ ಸಮಾನರು ಎಂಬುದನ್ನು ಸಾರಿದ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಪ್ರತಿಪಾದಿಸುವ ಮೂಲಕ ಕಾಯಕದಲ್ಲಿ ಮೇಲು ಕೀಳು ಎಂಬ ಭಾವಸಲ್ಲದು ಶರಣರು ಮಾಡುವ ಕಾಯಕವು ಶುದ್ಧ ಹಾಗೂ ಸಮಾಜಮುಖಿಯಾಗಿರಬೇಕು ಎಂದರಲ್ಲದೆ, ಇವರು ಬರೆದಿರುವ ವಚನಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ ಎಂಬುದಾಗಿ ಹೇಳಿದರು.

ನಿವೃತ್ತ ಶಾಲಾತನಿಖಾಧಿಕಾರಿ ಟಿ.ಶಿವಪ್ರಸಾದ್ ಮಾತನಾಡಿ, ಬಸವಣ್ಣನವರು ಶರಣ ಪರಂಪರೆಯ ವಚನ ಸಾಹಿತ್ಯವನ್ನು ಬರೆಯುವ ಮೂಲಕ ಅವರ ತತ್ವ ಸಿದ್ಧಾಂತಗಳು ವಿಶ್ವದಲ್ಲಿ ಪ್ರಸಿದ್ಧಿಯಾಗಿದೆ ವಿಶ್ವದ ಸಾಂಸ್ಕೃತಿಕ ನಾಯಕರಾಗಿ, ಸಮಾಜ ಸುಧಾರಕರಾಗಿ,  ಮಾಡಿದಂತ ಸೇವೆ ಅನನ್ಯವಾಗಿದೆ ಎಂದು ಹೇಳಿದರು.

ಇದೇ ವೇಳೆ ಸಂಗೀತ ವಿದ್ವಾನ್ ಆರ್.ತಿಪ್ಪೇಸ್ವಾಮಿ, ಟಿ.ಯಮುನಾ,  ಎಂ.ವಿ. ನಾಗರತ್ನಮ್ಮ, ಹೆಚ್.ವೇದಪುಷ್ಪ, .ಮಂಜಮ್ಮ,  ಎಂ.ಸಿದ್ದಗಂಗಮ್ಮ, ರಮಾ ಮತ್ತು ತಂಡದವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.           

ಈ ಕಾರ್ಯಕ್ರಮದಲ್ಲಿ ಸಂಗೀತ ವಿದುಷಿ ಲಕ್ಷ್ಮೀದೇವಮ್ಮ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಉಪಾಧ್ಯಕ್ಷೆ ನಾಗಸಂದ್ರಮ್ಮ ಸುಬ್ಬಣ್ಣಶೆಟ್ಟಿ, ಶಂಭುಲಿಂಗಪ್ಪ, ಸಾಹಿತಿ ಎಂ.ಕಿರಣ್ ಮಿರಾಜ್ಕರ್.  ಎಂ.ಬಿ .ಲಿಂಗಪ್ಪ, ಪಿ.ಎಂ. ತಿಪ್ಪೇಸ್ವಾಮಿ, ಎನ್. ಜಗದಾಂಬ, ಎನ್.ಬಸವರಾಜು, ಹಾಗೂ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *