
ಹಿರಿಯೂರು:
ನಗರದ ಜನತೆಯ ದೈನಂದಿನ ಬದುಕು ಈಗ ಧೂಳು ಮತ್ತು ಟ್ರಾಫಿಕ್ ಜಂಜಾಟದಲ್ಲಿ ಸಿಲುಕಿ ನಲುಗಿಹೋಗಿದೆ. ಇದಕ್ಕೆ ಕಾರಣ, ನಗರದ ಪ್ರಮುಖ ರಸ್ತೆಗಳ ಅಗಲೀಕರಣ ಕಾಮಗಾರಿಗಳು ಕಾಮಗಾರಿಗಳ ವಿಳಂಬ ಮತ್ತು ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯ. ಅಭಿವೃದ್ಧಿಯ ಕನಸು ತೋರಿಸಿ ಆರಂಭವಾದ ಈ ಕಾಮಗಾರಿಗಳು ಈಗ ಸಾರ್ವಜನಿಕರಿಗೆ ದೊಡ್ಡ ಶಾಪವಾಗಿ ಪರಿಣಮಿಸಿವೆ “ಪವರ್ ಫೋಕಸ್” ನ್ಯೂಸ್ ತಂಡದ ಮುಖ್ಯಸ್ಥರಾದ ಅರ್ಜುನ್ ಬ್ಯಾಡರಹಳ್ಳಿ ಆರೋಪಿಸಿದ್ದಾರೆ.
ತೀವ್ರ ಅಸಮಾಧಾನಕ್ಕೆ ಕಾರಣವಾಗಿರುವ ಪ್ರಮುಖ ಸ್ಥಳವೆಂದರೆ ಅದು ತಾಲ್ಲೂಕು ಕಚೇರಿ ಮುಂಭಾಗದ ಚನ್ನಲ್ ಬ್ರಿಡ್ಜ್ ಕಾಮಗಾರಿ. ಈ ರಸ್ತೆಯು ನಗರದ ಹೃದಯಭಾಗದಲ್ಲಿದ್ದು, ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇಲ್ಲಿನ ರಸ್ತೆ ಅಗಲೀಕರಣ ಕಾಮಗಾರಿ ಅತ್ಯಂತ ಕಳವಳಕಾರಿ ಸ್ಥಿತಿಯಲ್ಲಿದೆ. ರಸ್ತೆಯ ಒಂದು ಬದಿಯಲ್ಲಿ ಮಾತ್ರ ಕೆಲಸ ನಡೆದಿದ್ದು, ಮತ್ತೊಂದು ಬದಿಯ ಕೆಲಸ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಈ ಅರ್ಧಂಬರ್ಧ ಕೆಲಸದಿಂದಾಗಿ ರಸ್ತೆ ಕಿರಿದಾಗಿದ್ದು, ಸಂಚಾರ ದಟ್ಟಣೆ ಮಿತಿಮೀರಿದೆ. ಅತ್ಯಂತ ಬೇಜವಾಬ್ದಾರಿಯುತ ಸಂಗತಿಯೆಂದರೆ, ಯುಗಾದಿ ಹಬ್ಬದ ಸಂದರ್ಭದಲ್ಲಿ ಕೆಲಸ ಸ್ಥಗಿತಗೊಳಿಸಿ ಹೋದ ಕಾಂಟ್ರಾಕ್ಟರ್ ಮತ್ತು ಕಾರ್ಮಿಕರು ಇಂದಿಗೂ ಕಾಮಗಾರಿ ಸ್ಥಳಕ್ಕೆ ಮರಳಿಲ್ಲ. ಇದರಿಂದಾಗಿ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ವಿಳಂಬವು ಸಾರ್ವಜನಿಕರ ದೈನಂದಿನ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಧೂಳಿನ ಮಾರುತವೇ ಏಳುತ್ತಿದ್ದು, ವ್ಯಾಪಾರಿಗಳು, ಪಾದಚಾರಿಗಳು ಮತ್ತು ವಾಹನ ಸವಾರರು ಉಸಿರಾಟದ ತೊಂದರೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಿರಿದಾದ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುವುದರಿಂದ ಟ್ರಾಫಿಕ್ ಜಾಮ್ ದೈನಂದಿನ ಸಮಸ್ಯೆಯಾಗಿದೆ. ಜೊತೆಗೆ, ಅಗೆದ ರಸ್ತೆ ಮತ್ತು ಹರಡಿಕೊಂಡಿರುವ ನಿರ್ಮಾಣ ಸಾಮಗ್ರಿಗಳಿಂದಾಗಿ ಅಪಘಾತದ ಭೀತಿ ಸದಾ ಆವರಿಸಿದೆ.
ಅಧಿಕಾರಿಗಳ ಮತ್ತು ಕಾಂಟ್ರಾಕ್ಟರ್‌ನ ಈ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯೂರು ಜನತೆ ನೆಮ್ಮದಿಯಿಂದ ಸಂಚರಿಸುವ ದಿನ ಎಂದು ಬರುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ. ಆಕ್ರೋಶಗೊಂಡಿರುವ ನಾಗರಿಕರು, “ಇದೇ ಪರಿಸ್ಥಿತಿ ಮುಂದುವರಿದರೆ, ಕಾಮಗಾರಿ ಸ್ಥಳದಲ್ಲಿ ‘ನಾಪತ್ತೆಯಾಗಿರುವ ಕಾಂಟ್ರಾಕ್ಟರ್ ಮತ್ತು ಕೆಲಸಗಾರರನ್ನು ಹುಡುಕಿಕೊಡಿ’ ಎಂದು ಬೋರ್ಡ್ ಹಾಕಬೇಕಾಗುತ್ತದೆ” ಎಂದು ವ್ಯಂಗ್ಯವಾಗಿಯೇ ಎಚ್ಚರಿಸಿದ್ದಾರೆ.
ಆದುದರಿಂದ, ಹಿರಿಯೂರು ನಗರದ ಜನಸಾಮಾನ್ಯರ ಪರದಾಟವನ್ನು ಗಮನಿಸಿ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಬೇಕಿದೆ. ವಿಳಂಬ ಮಾಡುತ್ತಿರುವ ಕಾಂಟ್ರಾಕ್ಟರ್ ಮೇಲೆ ಸೂಕ್ತ ಕ್ರಮ ಕೈಗೊಂಡು, ಸ್ಥಗಿತಗೊಂಡಿರುವ ಚನ್ನಲ್ ಬ್ರಿಡ್ಜ್ ಮತ್ತು ರಸ್ತೆ ಕಾಮಗಾರಿಯನ್ನು ತಕ್ಷಣವೇ ಪುನರಾರಂಭಿಸಬೇಕು. ಯಾವುದೇ ನೆಪಗಳನ್ನು ನೀಡದೆ, ಯುದ್ಧೋಪಾದಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದಾಗಿ ಪವರ್ ಫೋಕಸ್ ನ್ಯೂಸ್ ತಂಡದಿಂದ ಎಚ್ಚರಿಕೆ ನೀಡಿದೆ.
