
ಹಿರಿಯೂರು:
ಬೆಂಗಳೂರಿನ ವಿಕಾಸ ಸೌಧದಲ್ಲಿರುವ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರ ಕೊಠಡಿಯಲ್ಲಿ ಹಿರಿಯೂರು ನಗರದ ದಕ್ಷಿಣ ಭಾಗಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ 100ಕೋಟಿರೂ. ಮೊತ್ತದ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸರ್ಕಾರದಿಂದ ಈಗಾಗಲೇ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಸಮರ್ಪಕವಾಗಿ ಶೀಘ್ರ ಅನುಷ್ಟಾನಗೊಳಿಸಬೇಕಾಗಿದೆ. ಯೋಜನೆಗೆ 122ಕೋಟಿರೂಗಳ ಪ್ರಸ್ತಾವನೆ ಸಲ್ಲಿಸಿದ್ದು, ಮೊದಲ ಹಂತದಲ್ಲಿ ಆರ್ಥಿಕ ಇಲಾಖೆ 100ಕೋಟಿ ರೂ. ಆಡಳಿತಾತ್ಮಕವಾಗಿ ಅನುಮೋದನೆ ನೀಡಿದೆ.

ಅಲ್ಲದೆ, ನಗರದ ಒಟ್ಟು 25ವಾರ್ಡ್ ಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಯೋಜನೆ ಸಿದ್ಧವಾಗಿದೆ. ಟೆಂಡರ್ ಪ್ರಕ್ರಿಯೆ ನಡೆದಿದ್ದು, ಜನವರಿ ತಿಂಗಳಿನಲ್ಲಿ ಅಂತಿಮಗೊಳ್ಳಲಿದೆ ಎಂಬುದಾಗಿ ಅವರು ಹೇಳಿದರು.
ಮಲಿನ ನೀರನ್ನು ಶುದ್ಧೀಕರಿಸಿ ವೇದಾವತಿ ನದಿಗೆ ಬಿಡುವ ಬದಲು ಕೈಗಾರಿಕಾ ವಲಯಗಳು ಮತ್ತು ಕೆರೆಗಳಿಗೆ ಮರುಬಳಕೆಯಾಗುವಂತೆ ಮಾಡಿ 2ನೇ ಹಂತದ ಕಾಮಗಾರಿಗೆ ಶೀಘ್ರ ಅಂದಾಜು ವೆಚ್ಚ ತಯಾರಿಸಿ ಸಲ್ಲಿಸಬೇಕು. ಎಂದರಲ್ಲದೆ,

ಈ ಕುರಿತು ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು. ಟೆಂಡರ್ ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಕಾರ್ಯಾರಂಭಕ್ಕೆ ತಕ್ಷಣ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಸೆಲ್ವಮಣಿ, ಮುಖ್ಯ ಎಂಜಿನಿಯರ್ ಪ್ರವೀಣ್ ಲಿಂಗಯ್ಯ, ಕಾರ್ಯಪಾಲಕ ಎಂಜಿನಿಯರ್ ಮಲ್ಲೇಶ್ ನಾಯ್ಕ, ಹೆಚ್ಚುವರಿ ಇಂಜಿನಿಯರ್ ಓಬನಾಯ್ಕ ಹಾಗೂ ಹಿರಿಯೂರು ನಗರಸಭೆ ಆಯುಕ್ತರಾದ ಎ.ವಾಸೀಂ ಅವರು ಉಪಸ್ಥಿತರಿದ್ದರು.
