
ಹಿರಿಯೂರು:
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಬೇಕು. ಕನ್ನಡ ನಾಡು-ನುಡಿ, ಗಡಿ, ಜಲದ ವಿಚಾರದಲ್ಲಿ ಅನ್ಯಾಯವಾದರೆ ಹೋರಾಟಕ್ಕೆ ಎಲ್ಲಾ ಕನ್ನಡಿಗರೂ ಸಿದ್ಧರಿರಬೇಕು ಎಂಬುದಾಗಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಕೋಶಾಧ್ಯಕ್ಷರಾದ ಜಿ.ಪ್ರೇಮ್ ಕುಮಾರ್ ಅವರು ಹೇಳಿದರು.
ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕ.ಸಾ.ಪ. ಹೋಬಳಿ ಘಟಕದ ಅಧ್ಯಕ್ಷರ ಪದಗ್ರಹಣ ಹಾಗೂ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜವನಗೊಂಡನಹಳ್ಳಿಯ ಜನ ಹೋರಾಟದಲ್ಲಿ ಸದಾ ಮುಂದಿದ್ದಾರೆ. ತಾಲ್ಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸುವಂತೆ 256 ದಿನಗಳವರೆಗೆ ಸುದೀರ್ಘ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆದಿದ್ದಾರೆ. ಅತ್ಯಂತ ಶ್ರೀಮಂತ ಬಾಷೆಯಾಗಿರುವ ಕನ್ನಡವನ್ನು ಕರ್ನಾಟಕದಲ್ಲಿ ಇನ್ನಷ್ಟು ಶ್ರೀಮಂತವಾಗಿ ಬೆಳೆಸಲು ಕನ್ನಡಿಗರು ಪಣ ತೊಡಬೇಕು ಎಂಬುದಾಗಿ ಅವರು ಹೇಳಿದರು.
ಹೋಬಳಿ ಘಟಕದ ನೂತನ ಅಧ್ಯಕ್ಷರಾದ ವೀರೇಶ್ ಅವರಿಗೆ ನಿಕಟಪೂರ್ವ ಅಧ್ಯಕ್ಷರಾದ ಬಿ.ನಿರಂಜನಮೂರ್ತಿ ಅವರು ಕನ್ನಡಬಾವುಟ ಹಸ್ತಾಂತರಿಸಿದರು. ವೀರೇಶ್ ಹಾಗೂ ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷರಾದ ರಾಮಚಂದ್ರಪ್ಪ ಅವರು ಮಾತನಾಡಿದರು.

ಈ ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕರಿಯೋಬನಹಳ್ಳಿ ಪ್ರಹ್ಲಾದ್ ಹಾಗೂ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಪ್ರಶಸ್ತಿ ಪುರಸ್ಕೃತೆ ಸರಸ್ವತಿ ಅವರನ್ನು ಸನ್ಮಾನಿಸಲಾಯಿತು.
ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಣ್ಣ ಕನ್ನಡದ ಬಗ್ಗೆ ಉಪನ್ಯಾಸ ನೀಡಿದರು. ನಗರಸಭೆ ಮಾಜಿ ಸದಸ್ಯರಾದ ಆರ್.ರವಿಚಂದ್ರನ್, ಜೆ.ಜೆ.ಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಮಹಾಲಿಂಗಪ್ಪ, ಮಾಜಿ ಅಧ್ಯಕ್ಷ ಅಲ್ತಾಫ್ ಅಹಮ್ಮದ್, ಕ.ಸಾ.ಪೈಮಂಗಲ ಹೋಬಳಿ ಘಟಕದ ಅಧ್ಯಕ್ಷತಿಪ್ಪೇಸ್ವಾಮಿ, ಬಳ್ಳಾರಿ ರಘು, ನರಸಿಂಹಮೂರ್ತಿ, ಈಶ್ವರಪ್ಪ, ನಾಗರಾಜ, ಚಿತ್ತಯ್ಯ, ಈರಣ್ಣ, ಶಶಿಕುಮಾರ್, ಸದಾಕತ್, ಉಜ್ಜಯಿನಿ, ಚಿತ್ರಲಿಂಗಪ್ಪ, ವೀರಭದ್ರಪ್ಪ, ಮಂಜುನಾಥ್, ಕೃಷ್ಣಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

