April 21, 2026
0002

ಹಿರಿಯೂರು:

ತಾಲ್ಲೂಕಿನಲ್ಲಿ 2025-26ನೇ ಸಾಲಿನಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಆಗದೆ  ಇರುವುದರಿಂದ ಮುಂಗಾರಿನಲ್ಲಿ ಬಿತ್ತನೆ ಮಾಡಬೇಕಾಗಿರುವ ಶೇಂಗಾ, ಸೂರ್ಯಕಾಂತಿ, ಹತ್ತಿ ಹಾಗೂ ಮೆಕ್ಕೆಜೋಳ ಸೇರಿದಂತೆ ಯಾವುದೇ ಬೆಳೆಗಳು ಸಹ ಬಿತ್ತನೆ ಆಗಿರುವುದಿಲ್ಲ. ತೀವ್ರ ಬರಗಾರಕ್ಕೆ ತುತ್ತಾಗಿರುವ ಹಿರಿಯೂರು ತಾಲ್ಲೂಕನ್ನು ಬರಪಟ್ಟಿಗೆ ಸೇರಿಸಿ ಬರಪರಿಹಾರವನ್ನು ಕೊಡಬೇಕು ಎಂಬುದಾಗಿ ಎಂಬುದಾಗಿ ರೈತ ಸಂಘದ  ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.

ನಗರದ  ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ರೈತಸಂಘದ ನೇತೃತ್ವದಲ್ಲಿ ತೀವ್ರ ಬರಗಾಲಕ್ಕೆ ತುತ್ತಾಗಿರುವ ಹಿರಿಯೂರು ತಾಲ್ಲೂಕನ್ನು  ಬರಪಟ್ಟಿಗೆ ಸೇರಿಸಿ ಬರಪರಿಹಾರ ಕೊಡಬೇಕೆಂದು ಒತ್ತಾಯಿಸಿ, ತಾಲ್ಲೂಕು ತಹಶೀಲ್ದಾರರ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ  ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಹಿಂಗಾರು ಮಳೆ ಸ್ವಲ್ಪವೇ ಆಗಿದ್ದು, ಆ ಮಳೆಯನ್ನು ನಂಬಿಕೊಂಡು ರಾಗಿ, ಜೋಳ, ನವಣೆ, ಹುರುಳಿ, ಹತ್ತಿ, ತೊಗರಿ, ಅವರೆ,  ಅಳಸಿಂದಿ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಲಾಯಿತು. ಬಿತ್ತನೆ  ಮಾಡಿ ಒಂದುವರೆ ತಿಂಗಳಾದರೂ ಮಳೆ ಬಾರದೇ ಇರುವುದರಿಂದ ಬಿತ್ತಿದ ಎಲ್ಲಾ ಪಸಲು ಒಣಗಿಹೋಗಿದ್ದು, ಬಿತ್ತನೆಗಾಗಿ ಬೀಜ, ಗೊಬ್ಬರ, ಬೇಸಾಯ ಎಲ್ಲಾ ಖರ್ಚು ಮಾಡಿ ರೈತರು ಕಂಗಾಲಾಗಿದ್ದಾರೆ ಎಂಬುದಾಗಿ ಹೇಳಿದರು.

ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಹಾಗೂ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ಹಿರಿಯೂರು ತಾಲ್ಲೂಕನ್ನು ಬರಪಟ್ಟಿಗೆ ಸೇರಿಸಿ, ಬರಪ್ರದೇಶವೆಂದು ಘೋಷಿಸಿ, ಸರ್ಕಾರದಿಂದ ರೈತರಿಗೆ ಪ್ರತಿ ಎಕರೆಗೆ  25ಸಾವಿರ  ಬರಪರಿಹಾರ ಕೊಡುವುದರ ಜೊತೆಗೆ ಜಾನುವಾರುಗಳಿಗೆ ಮೇವು ನೀರು ಒದಗಿಸಬೇಕು ಎಂಬುದಾಗಿ ಅವರು ಒತ್ತಾಯಿಸಿದರು.

ರೈತರು ಧೃತಿಗೆಡದೆ  ಧೈರ್ಯವಾಗಿ ಬದುಕಲು ಸರ್ಕಾರ ಧೈರ್ಯ ತುಂಬಿ ಸಹಾಯದ ಹಸ್ತ ಚಾಚಬೇಕು. ನಮ್ಮ ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಒಂದು ವಾರದೊಳಗಾಗಿ ಬರಪರಿಹಾರ ಘೋಷಣೆ ಮಾಡಬೇಕು, ಪರಿಹಾರ ಕೊಡದೆ ಇದ್ದಲ್ಲಿ ರೈತರು ಉಗ್ರಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂಬುದಾಗಿ  ಅವರು ಎಚ್ಚರಿಸಿದರು.

ಈ ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷರಾದ ಆಲೂರುಸಿದ್ದರಾಮಣ್ಣ, ರೈತಮುಖಂಡರುಗಳಾದ ರಂಗಸ್ವಾಮಿ, ಸಣ್ಣತಿಮ್ಮಣ್ಣ, ವಿರೂಪಾಕ್ಷಪ್ಪ, ಗಿರೀಶ್, ವೆಂಕಟೇಶ್, ರಾಮಣ್ಣ, ತಿಪ್ಪೇಸ್ವಾಮಿ, ಗೌಡಪ್ಪ, ಜಗನ್ನಾಥ್, ಜಯಣ್ಣ, ನಾರಾಯಣಪ್ಪ, ಜಗದೀಶ್, ಶಿವಣ್ಣ, ಕನ್ಯಪ್ಪ, ಈರಣ್ಣ, ಚಂದ್ರಣ್ಣ, ಗೋವಿಂದಪ್ಪ ಸೇರಿದಂತೆ ಅನೇಕರು  ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *