

ಹಿರಿಯೂರು:
ರಾಜ್ಯದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷರ 2ನೇ ಅವಧಿಯ ಮೀಸಲಾತಿಯನ್ನು ಸರ್ಕಾರ ಸಕಾಲಕ್ಕೆ ಪ್ರಕಟಿಸದಿರುವ ಕಾರಣ ಈಗಾಗಲೇ ಮುಗಿದಿರುವ 16 ತಿಂಗಳ ಅಧಿಕಾರವನ್ನು ಮರಳಿಕೊಡಿಸುವಂತೆ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದೇವೆ ಎಂಬುದಾಗಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿಸದಸ್ಯರಾದ ಅಜಯ್ ಕುಮಾರ್ ಹೇಳಿದರು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸ್ಥಳೀಯ ಸಂಸ್ಥೆಗಳ ಮೊದಲ ಅವಧಿಯ ಅಧಿಕಾರ 2020ರ ನವಂಬರ್ 4ರಂದು ಆರಂಭವಾಗಿ 2023 ಮೇ 4ಕ್ಕೆ ಮುಕ್ತಾಯಗೊಂಡಿತ್ತು.ಅಂದು ರಾಜ್ಯ ಸರ್ಕಾರ ಸಕಾಲದಲ್ಲಿ ಮೀಸಲಾತಿ ಪ್ರಕಟಿಸದ ಕಾರಣ 16 ತಿಂಗಳು ಚುನಾಯಿತ ಸದಸ್ಯರು ಅಧಿಕಾರ ಇಲ್ಲದೆ ವನವಾಸ ಅನುಭವಿಸಿದ್ದರು.
ನಗರಸಭೆಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಘೋಷಣೆಯಲ್ಲಿ ಹಲವು ನ್ಯೂನ್ಯತೆಗಳು ಕಂಡು ಬಂದ ಕಾರಣದಿಂದಾಗಿ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು ಎಂಬುದಾಗಿ ಅವರು ಹೇಳಿದರು.
ಕಳೆದ 2023ರ ಮೇ 5ರಿಂದ 2024ರ ಆಗಸ್ಟ್ 18ರವರೆಗೆ ಸ್ಥಳೀಯ ಸಂಸ್ಥೆಗಳ ಆಡಳಿತ ಆಡಳಿತಾಧಿಕಾರಿಗಳ ಕೈಯಲ್ಲಿತ್ತು. 2ನೇ ಅವಧಿಯ 30 ತಿಂಗಳ ಅಧಿಕಾರದಲ್ಲಿ ನಮ್ಮದಲ್ಲದ ತಪ್ಪಿಗೆ 16 ತಿಂಗಳು ಅಧಿಕಾರ ಕಿತ್ತುಕೊಂಡು ಮನೆಯಲ್ಲಿ ಕೂರಿಸಿದ್ದು ನ್ಯಾಯವಲ್ಲ ಎಂದರಲ್ಲದೆ,
ಪ್ರಸ್ತುತ ಇರುವ ಸ್ಥಳೀಯ ಸಂಸ್ಥೆಗಳ ಅಧಿಕಾರಾವಧಿ 2025ರ ನವಂಬರ್ 4ಕ್ಕೆ ಮುಗಿಯಲಿದೆ. ನಮಗೆ ಮರಳಿ 16 ತಿಂಗಳು ಅಧಿಕಾರ ನೀಡಿ ಮುಂದುವರೆಸಬೇಕು ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಇದೇ ತಿಂಗಳು 8ರಂದು ಕೋರ್ಟ್ ವಿಚಾರಣೆ ನಡೆಸಲಿದ್ದು, ನ್ಯಾಯ ಸಿಗುವ ಭರವಸೆ ಇದೆ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದರು.