October 6, 2025
000000000000001

ಹಿರಿಯೂರು :

ನಗರದ ಏಳುಕೋಟಿ ಮೈಲಾರಲಿಂಗೇಶ್ವರಸ್ವಾಮಿ ಸರಪಳಿ ಪವಾಡವು  ಶುಕ್ರವಾರ ಸಂಜೆ 5.30ಕ್ಕೆ  ತಾಲ್ಲೂಕು ತಹಶೀಲ್ದಾರ್ ರಾದ ಸಿದ್ದೇಶ್ ರವರು ಪೂಜೆ ಸಲ್ಲಿಸಿದ ನಂತರ ಸರಪಳಿ ಪವಾಡವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆರಂಭವಾಯಿತು.

ಸರಪಳಿ ಪವಾಡ ಪಾರಂಪರಿಕವಾಗಿ ನಡೆದು ಬಂದಿದ್ದು, ಹಾಲುಮತದ ಮೂರು ಮನೆತನದವರಾದ ಭಂಡಾರದವರು, ಗಣಾಚಾರರು, ಹಾಗೂ ಸೊಪ್ಪಿನವರು ಒಟ್ಟಾಗಿ ಸ್ವಾಮಿಯ ಸರಪಳಿ ಪವಾಡ ಹಾಗೂ ಇತರೆ ಧಾರ್ಮಿಕ ವಿಧಿಗಳನ್ನು ನಡೆಸಿಕೊಟ್ಟರು.

ಈ ಬಾರಿಯ ಏಳುಕೋಟಿ ಮೈಲಾರಲಿಂಗೇಶ್ವರಸ್ವಾಮಿಯ ಸರಪಳಿಯನ್ನು ಪೂಜಿಸಿ ಎಳೆಯಲು ಆರಂಭಿಸಿದ ನಾಲ್ಕುವರೆ ಗಂಟೆಯ  ನಂತರ ಸುಮಾರು 1.5 ಮೀಟರ್  ಉದ್ದದ ಸರಪಳಿಯು  ಮುಕ್ಕಾಲು ಮೀಟರ್ (ಮೂರು ಅಡಿ)  ಅಂತರದಲ್ಲಿ  ಹರೀಶ್ ಎಂಬುವವರಿಂದ ತುಂಡಾಯಿತು.

ವಿವಿಧ ಜಾತಿ, ಧರ್ಮ ಹಾಗೂ ಕಸುಬಿಗೆ ಸೇರಿದ ಭಕ್ತ ಸಮುದಾಯ ಸ್ವಾಮಿಗೆ ಹರಕೆ ತೀರಿಸಿದರು. ಹಾಲುಮತದ ಮನೆತನದವರು ಶರನ್ನವರಾತ್ರಿಯ ಒಂಭತ್ತು ದಿನಗಳ ಕಾಲ ಕಟ್ಟುನಿಟ್ಟಾದ  ನಿಯಮ ಪಾಲನೆ ಮಾಡಿ, ಸರಪಳಿ ಪವಾಡದ  ದಿನ ಮನೆಮಂದಿಯಲ್ಲಾ ಉಪವಾಸವಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮುಜುರಾಯಿ ಅಧಿಕಾರಿಗಳು ಪೂಜೆ ಸಲ್ಲಿಸಿದ ನಂತರ, ದೇವಸ್ಥಾನದ ಮುಂಭಾಗದ ತ್ರಿಶೂಲ ಮುದ್ರೆ ಹೊಂದಿರುವ ಕಲ್ಲಿನ ಕಂಬಕ್ಕೆ ಸರಪಳಿ ಬಿಗಿಯಲಾಗುತ್ತದೆ. ಉಪವಾಸವಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ  ತನ್ನೆಲ್ಲಾ ಬಲವನ್ನು ಉಪಯೋಗಿಸಿ ಸರಪಳಿಯನ್ನು ಎಳೆಯುತ್ತಾರೆ.

ಸರಪಳಿ ಅರ್ಧಕ್ಕೆ ತುಂಡಾದರೆ ಸಮೃದ್ಧ ಮಳೆ-ಬೆಳೆ, ಆಕಸ್ಮಾತ್ ಸರಪಳಿ ಕಲ್ಲುಗೂಟಕ್ಕೆ ಸಮೀಪ ತುಂಡಾದರೆ ಮಳೆ-ಬೆಳೆ ಸಾಧಾರಣೆನ್ನುವುದು ಹಿರಿಯರ ನಂಬಿಕೆ. ಸರಪಳಿಗೆ ಹಾಲು, ತುಪ್ಪ, ಜೇನುತುಪ್ಪ, ವಿವಿಧ ಹಣ್ಣುಗಳಿಂದ ತಯಾರಿಸಿದ ಪ್ರಸಾದವನ್ನು ಮಣೇವು ಮತ್ತು ದೋಣಿಸೇವೆಯಲ್ಲಿ ಸ್ವಾಮಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸಲಾಗಿತ್ತು. ಅಮವಾಸ್ಯೆ ನಂತರ ಸರಪಳಿಗೆ ಬಲಿಪೂಜೆ ಮಾಡಿ ಅನ್ನಸಂತರ್ಪಣೆ ಮಾಡುವುದು ವಾಡಿಕೆ.

ಮೈಲಾರದಲ್ಲಿ ಆಗುವ “ಕಾರಣಿಕ”, ಹಿರಿಯೂರು ತಾಲ್ಲೂಕಿನ ಅಂಬಲಗೆರೆ ಗ್ರಾಮದ ರಂಗನಾಥಸ್ವಾಮಿ ದೇಗುಲದ ಮುಂದಿರುವ ಗರುಡಗಂಬದ ಚಲನೆ ಹಾಗೂ ನಗರದ ಮೈಲಾರದೇವರ ಸರಪಳಿ ಪವಾಡದಲ್ಲಿ  ಬರುವ ಹೇಳಿಕೆಗಳ ಬಗ್ಗೆ ರೈತರಿಗೆ ಹೆಚ್ಚಿನ ನಂಬಿಕೆ. ಸರಪಳಿ ಪವಾಡ ಸ್ಥಾಪನೆಗೊಂಡ ನಂತರ ಸ್ವಾಮಿಗೆ “ಗಂಗಾಪೂಜೆ” ಸಲ್ಲಿಸಿ ಎಲ್ಲಾ  ಧಾರ್ಮಿಕ ಕಾರ್ಯಗಳಿಗೆ ತೆರೆ ಎಳೆಯಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ,  ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನಾಗೇಂದ್ರನಾಯ್ಕ,  ಭೋಜಣ್ಣ, ಜಗದೀಶ್ ಭಂಡಾರಿ, ಎ.ಮಂಜುನಾಥ್, ಗುತ್ತಿಗೆದಾರ ವೆಂಕಟೇಶ್ ಸೇರಿದಂತೆ  ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *