

ಹಿರಿಯೂರು :
ಆದರ್ಶ ಶಿಕ್ಷಕರೆಂದೇ ಹೆಸರಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಹುಟ್ಟುಹಬ್ಬವನ್ನು ದೇಶಾದ್ಯಂತ ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿದ್ದು, ಇಂತಹ ಶಿಕ್ಷಕರ ದಿನಾಚರಣೆಯಂದು ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಶ್ರಮಿಸುತ್ತಿರುವ ನಮ್ಮ ಎಲ್ಲಾ ಶಿಕ್ಷಕ-ಶಿಕ್ಷಕಿಯರನ್ನು ಗೌರವಿಸಬೇಕಿದೆ ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಆವರಣದಲ್ಲಿ “ಶಿಕ್ಷಕರ ದಿನಾಚರಣೆ” ಅಂಗವಾಗಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿಫುಲೆಯವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಸಮಾಜದಲ್ಲಿ ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರವಾಗಿದ್ದು, ಸಮಾಜದಲ್ಲಿನ ಎಲ್ಲಾ ವೃತ್ತಿಗಳಿಗಿಂತ ಕಳಂಕರಹಿತ ವೃತ್ತಿಯಾಗಿದೆ, ಅಲ್ಲದೆ ಪ್ರತಿಯೊಂದು ಕ್ಷೇತ್ರಕ್ಕೆ ಅತ್ಯುತ್ತಮ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುವ ಶಿಕ್ಷಕ ವೃತ್ತಿಯು ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಇಂತಹ ವೃತ್ತಿಯನ್ನು ಮಾಡುತ್ತಿರುವ ಪ್ರತಿಯೊಬ್ಬ ಶಿಕ್ಷಕರನ್ನು ನಾವು-ನೀವೆಲ್ಲರೂ ಗೌರವಿಸಬೇಕು ಎಂಬುದಾಗಿ ಹೇಳಿದರು.

ಉಪನ್ಯಾಸಕಿ ಶ್ರೀಮತಿ ಗಂಗಮ್ಮ ಮಾತನಾಡಿ, ಭಾವೀ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕ ವೃತ್ತಿ ತುಂಬಾ ಪವಿತ್ರವೃತ್ತಿಯಾಗಿದ್ದು, ಶಿಕ್ಷಕರಾದ ನಾವುಗಳು ಸಮಾಜದಲ್ಲಿ ಉತ್ತಮ ಶಿಕ್ಷಕರಾಗಲು ಡಾ.ರಾಧಾಕೃಷ್ಣನ್ ರವರ ಆದರ್ಶಗಳನ್ನು ಪಾಲಿಸಬೇಕಲ್ಲದೆ, ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸುವ ಪ್ರತಿಯೊಬ್ಬ ಶಿಕ್ಷಕರನ್ನು ಗೌರವಿಸಬೇಕು ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕರಾದ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಕೋ-ಆರ್ಡಿನೇಟರ್ ಗಳಾದ ಶ್ರೀಮತಿ ನಂದಿನಿ, ಶ್ರೀಮತಿ ರಚನ, ಶಿಕ್ಷಕಿಯರುಗಳಾದ ರಜಿಯಾ, ಗಂಗಮ್ಮ, ರಂಜಿತಾ, ಸಬೀಹಾ, ಮುಬೀನಾ, ಹೇಮಲತಾ, ಸಾಧಿಕಾ, ಮಮತಾ, ಭಾಗ್ಯ, ಪೂಜಾ, ಕಾವ್ಯ, ಜಯಸುಧಾ, ಅಕ್ಷಿತಾ, ಸುಲೋಚನಾ, ಶಿಕ್ಷಕ ಉಮೇಶ್ ಯಾದವ್, ಶಿವರಾಜ್ ನಾಯಕ್, ಸೇರಿದಂತೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.