

ಹಿರಿಯೂರು :
ಈ ದೇಶ ಕಂಡಂತಹ ಮಹಾನ್ ನಾಯಕರುಗಳಾದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ತತ್ವ ಹಾಗೂ ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವ ಮೂಲಕ ದೇಶದ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರುಹನುಮಂತರಾಯಪ್ಪ ಅವರು ಹೇಳಿದರು.
ನಗರದ ವಾಣಿವಿಲಾಸವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಾನ್ ನಾಯಕರುಗಳ ಜಯಂತಿಗಳು ಕೇವಲ ರಜಾ ದಿನಗಳಾಗಿ ಬಳಕೆಯಾಗದೇ ಈ ಜಯಂತಿಗಳಂದು ದೇಶಕ್ಕಾಗಿ ದುಡಿದ ಮಹಾನ್ ನಾಯಕರುಗಳನ್ನು ನಮ್ಮ ಮುಂದಿನ ಯುವಪೀಳಿಗೆಯಾದ ವಿದ್ಯಾರ್ಥಿಗಳಿಗೆ ಪರಿಚಯಿಸುವ ವೇದಿಕೆಯಾಗಬೇಕು. ಆಗ ಮಾತ್ರ ಈ ಮಹಾತ್ಮರ ಜಯಂತಿ ಆಚರಣೆಗಳಿಗೆ ನಿಜವಾದ ಅರ್ಥ ಸಿಗುತ್ತದೆ ಎಂಬುದಾಗಿ ಅವರು ಹೇಳಿದರು.

ಕೋ-ಆರ್ಡಿನೇಟರ್ ಶ್ರೀಮತಿ ರಚನ ಅವರು ಮಾತನಾಡಿ ರಾಷ್ಟ್ರಪಿತ ಮಹತ್ಮಾ ಗಾಂಧೀಜಿ ಹಾಗೂ ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರೂ ಅಕ್ಟೋಬರ್ 2ರಂದು ಜನಿಸಿದ ಮಹಾನ್ ವ್ಯಕ್ತಿಗಳಾಗಿದ್ದು, ಗಾಂಧೀಜಿಯವರು ರೈತರನ್ನು “ಈ ದೇಶದ ಬೆನ್ನೆಲುಬು” ಎಂದರೆ, ಲಾಲ್ ಬಹದ್ದೂರ್ ಶಾಸ್ತ್ರಿಯವರು “ಜೈಜವಾನ್ ಜೈಕಿಸಾನ್ “ಎಂಬ ಘೋಷವಾಕ್ಯದೊಂದಿಗೆ ದೇಶವನ್ನು ಆಳಿದರು. ಎಂಬುದಾಗಿ ಅವರು ಹೇಳಿದರು.
ಶಿಕ್ಷಕಿ ಶ್ರೀಮತಿ ಹೇಮಲತಾ ಅವರು ಮಾತನಾಡಿ ಈ ದೇಶವನ್ನು ಬ್ರಿಟೀಷರ ದಾಸ್ಯದ ಸಂಕೋಲೆಯಿಂದ ಬಿಡಿಸಲು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸುವ ಮೂಲಕ ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ಮಹಾತ್ಮಗಾಂಧೀಜಿಯವರು ಇಂದಿನ ಯುವಪೀಳಿಗೆಗೆ ಮಾದರಿಯಾಗಿದ್ದಾರೆ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ, ಕೋ-ಆರ್ಡಿನೇಟರ್ ಗಳಾದ ಶ್ರೀಮತಿನಂದಿನಿ, ಶ್ರೀಮತಿರಚನ, ಶಿಕ್ಷಕಿಯರುಗಳಾದ ಶ್ರೀಮತಿಹೇಮಲತಾ, ಶ್ರೀಮತಿಅಕ್ಷಿತ, ಶ್ರೀಮತಿಸುಲೋಚನ, ಶಿಕ್ಷಕರಾದ ಶಿವರಾಜ್ ನಾಯಕ್, ಪ್ರಭಾಕರ್ ಸೇರಿದಂತೆ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.