
ಹಿರಿಯೂರು :
ಮುಂದಿನ ತಿಂಗಳು ಜುಲೈ 5 ರಂದು “ಕಥಾಗುಚ್ಚ” ಸಾಹಿತ್ಯ ಸಂಘಟನೆಯ 8ನೇ ವಾರ್ಷಿಕೋತ್ಸವ ಸಮಾರಂಭ ಎಂದೊಡನೆ ನಮಗೆಲ್ಲಾ ಅದೇನೋ ಸಂತಸ, ಸಡಗರ, ಸಂಭ್ರಮ, ನಮ್ಮ ಮೈಮನಸ್ಸುಗಳಿಗೆ ರೋಮಾಂಚನ, ಸಂಭ್ರಮದ ವಾತಾವರಣ, ಆ ದಿನದ ಸಂಭ್ರಮವನ್ನು ಸವಿಯಲು, ಆ ಸಂಭ್ರಮ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತು ಕಾಯುವ ಅನುಭವವಾಗುತ್ತಿದೆ.
ಸಮಾರಂಭದ 2 ಕಣ್ಣುಗಳೆಂದರೆ ಕಾರ್ಯಕ್ರಮದ ನಿರ್ವಾಹಕರುಗಳಾದ ನಮ್ಮೆಲ್ಲರ ಪ್ರೀತಿಯ ಶ್ರೀಮತಿಸುಮಾಕಳಸಾಪುರ ಹಾಗೂ ಶ್ರೀಮತಿಲತಾಜೋಷಿ ಎಂದರೆ ತಪ್ಪಾಗಲಾರದು, ಸಮಾರಂಭದ ಆರಂಭದಿಂದ ಕಟ್ಟಕಡೆಯವರೆಗೂ ಬಂದ ಅತಿಥಿಗಳನ್ನು ಸಂಭ್ರಮದಿಂದ ಸ್ವಾಗತಿಸಿಕೊಂಡು ಅತ್ತಿಂದಿತ್ತ ಓಡಾಡುವ ಅವರ ಖುಷಿ ನೋಡುವುದೇ ಒಂದು ಚಂದ.

ನಾವೆಲ್ಲಾ ಇನ್ನೆಷ್ಟು ದಿನಕ್ಕೆ ಸಮಾರಂಭಕ್ಕೆ ಹೋಗಬೇಕು ಅಂತ ಕಾಯುವಂತಾಗಿದೆ, ಈ ಜೂನ್ ತಿಂಗಳ ಕ್ಯಾಲೆಂಡರ್ ಹಾಳೆಗಳು ಬೇಗ ಬೇಗ ಸರ್ರನೆ ಸರಿದು, ಏನಾದರೂ ಪವಾಡ ಸಂಭವಿಸಿ, ಜುಲೈ 5 ನೇ ತಾರೀಕು ಈ ಭಾನುವಾರವೇ ಬರಬಾರದೇ ಎಂದೆನ್ನಿಸುತ್ತಿದೆ, ಆದರೆ ಜುಲೈ 5 ನೇ ತಾರೀಕು ಬರಲು ಇನ್ನು 2-3 ಭಾನುವಾರಗಳನ್ನು ಕಾಯಬೇಕಲ್ಲ ಎಂಬುದು ನಮ್ಮ ಚಿಂತೆಯಾಗಿದೆ.
ಕಾರ್ಯಕ್ರಮಕ್ಕೆ ಹೋದ ತಕ್ಷಣ ಸ್ವಾಗತಿಸುವ ರಾಘವೇಂದ್ರಇನಾಂದಾರ್, ಗಿರೀಶಕುಲಕರ್ಣಿಯವರು ಮುಗುಳ್ನಗುತ್ತಾ ಕೈಕುಲುಕುವ ನಮ್ಮ ಮಲ್ಲಾರೆಡ್ಡಿಯವರು ಕೃಷ್ಣಮೂರ್ತಿಸರ್, ಹಿರಿಯೂರುಪ್ರಕಾಶ್, ಹರೀಶಚಿತ್ರದುರ್ಗ, ಬಾಹುಬಲಿಸರ್, ನಟರಾಜಸರ್ ಚೇತನರಾಣೆಬೆನ್ನೂರ, ಪ್ರಸನ್ನಕುಮಾರ್, ನರಸಿಂಹಉಪಾಧ್ಯ, ಇರ್ಫಾನ್ ಇವರನ್ನೆಲ್ಲಾ ಕಾಣಲು ನಮ್ಮ ಮನಸ್ಸು ತವಕಿಸುತ್ತಿದೆ.

ಅಷ್ಟೇ ಅಲ್ಲಾ, ಸಮಾರಂಭದ ತುಂಬಾ ಲವಲವಿಕೆಯಿಂದ ಎಲ್ಲರ ಜೊತೆಗೆ ಬೆರೆತು ನಗುನಗುತ್ತಾ ಓಡಾಡುವ ನಮ್ಮ ಸುಜಾತರೆಡ್ಡಿ, ಅಶ್ವಿನಿ ಕಾಶೀಕರ್, ಆಶಾಹೆಗಡೆ, ವಿಜಯಕಾಂಬಿ, ಜಯಶ್ರೀಮೇಡಂ, ಅನ್ನಪೂರ್ಣ, ಇಂಪಾದ ಮಧುರ ಭಾವಗೀತೆಗಳ ಒಡತಿ-ಸಾಹಿತಿ ಮಂಗಳನಾಡಿಗ್ ಇವರೆಲ್ಲರನ್ನು ನೋಡುವ ಆತುರ, ಅಲ್ಲೆಲ್ಲಾ ಅವರ ಜೊತೆ ನಿಂತು ಪೋಟೋ ತೆಗೆಸಿಕೊಳ್ಳಬೇಕೆಂಬ ಕಾತುರ.
ಬೆಳಗ್ಗೆ ಸುಮಾರು 10-30ಕ್ಕೆ ಸಮಾರಂಭ ಉದ್ಘಾಟನೆ ಆಗುವುದಿದ್ದರೆ, ಉದ್ಘಾಟನೆಗೂ ಮುನ್ನಾ ಗೆಳೆಯ-ಗೆಳತಿಯರ ಜೊತೆ ಸೊಗಸಾದ ಇಡ್ಲಿ, ಸಂಬಾರ್, ವಡೆ, ಅಥವಾ ಬಿಸಿಬಿಸಿ ಉಪ್ಪಿಟ್ಟೋ, ಟೊಮೆಟೋ ಬಾತ್, ಸವಿದು, ಕಾರ್ಯಕ್ರಮಕ್ಕೆ ಹೋದರೆ, ಉದ್ಘಾಟನೆ ನಂತರ ಉದ್ಘಾಟಕರ ಭಾಷಣ, ಮುಖ್ಯ ಅತಿಥಿಗಳ ಹಿತನುಡಿಗಳನ್ನು ಕೇಳುವುದೇ ಒಂದು ಚಂದ.

ಮದ್ಯಾಹ್ನದ ಹೊತ್ತಿಗೆ ಊಟದ ಬಿಡುವು, ಅಬ್ಬಬ್ಬಾ ಬಾಯಿ ಚಪ್ಪರಿಸುವಂತಹ ಊಟ, ಸ್ನೇಹಿತರ ಜೊತೆ ಆರಾಮಾಗಿ, ಖುಷಿಖುಷಿಯಾಗಿ ಮಾತನಾಡುತ್ತಾ, ಒಂದಿಷ್ಟು ಬಿಸಿಬಿಸಿ ಅನ್ನ ಸಂಬಾರ್, ಪಾಯಸ, ಬಗೆಬಗೆಯಪಲ್ಯಗಳು, ಉಪ್ಪಿನಕಾಯಿ ಊಟ ಸವಿದು, ಬಂದ ಅತಿಥಿಗಳೊಂದಿಗೆ ಸಂಭ್ರಮಿಸಿ ಫೋಟೋ ಕ್ಲಿಕ್ಕಿಸಿಕೊಂಡು ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡರೆ ಮದ್ಯಾಹ್ನ ಕಳೆಯಿತು.
ಸಂಜೆ ಮತ್ತೆ 4 ಗಂಟೆಯ ಬಳಿಕ ಟೇಸ್ಟ್ ಫುಲ್ ಸ್ನ್ಯಾಕ್ಸ್ ಮತ್ತು ಬಿಸಿಬಿಸಿ ಕಾಫಿ-ಟೀ ಸವಿಯುತ್ತಾ ಗೆಳೆಯ-ಗೆಳತಿಯರೊಂದಿಗೆ ಒಂದಿಷ್ಟು ಹರಟೆ ಒಡೆದು, ಸಂಜೆಯ ಸಮಾರೋಪ ಸಮಾರಂಭಕ್ಕೆ ಹಾಜರಾದರೆ ವಿವಿಧ ಗೋಷ್ಠಿಗಳು, ಹಾಗೂ ಮುಖ್ಯ ಅತಿಥಿಗಳ ಹಿತನುಡಿಗಳು, ಕಥಾಗುಚ್ಚದ ಸದಸ್ಯರ ಹಾಡು-ನೃತ್ಯ, ಕಥೆ-ಕವನಗಳ ವಾಚನ, ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ.
ಕಾರ್ಯಕ್ರಮದ ಕೊನೆಯಲ್ಲಿ ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರಿಗೆ ಹಾಗೂ ಸಾಧನೆಗೈದ ಸಾಧಕಿಯರಿಗೆ ಸನ್ಮಾನ, ಆನಂತರ ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಲತಾ ಜೋಷಿ, ಹಾಗೂ ಶ್ರೀಮತಿ ಸುಮಾಕಳಸಾಪುರರಿಂದ ವಿದಾಯದ ಭಾಷಣ ಅಂತಿಮವಾಗಿ ಕಥಾಗುಚ್ಚದ ಎಲ್ಲಾ ಸದಸ್ಯರೊಂದಿಗೆ ಒಂದು ಗ್ರೂಫ್ ಫೋಟೋದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.
ಸಂಜೆ ಎಲ್ಲಾ ಮುಗಿಸಿಕೊಂಡು ಊರ ಕಡೆ ಪ್ರಯಾಣ ಬೆಳೆಸಿದರೆ ದಾರಿಯುದ್ಧಕ್ಕೂ ಕಾಡುವ ಕಥಾಗುಚ್ಚದ ನೆನಪುಗಳು, ಕಾರ್ಯಕ್ರಮದ ಎಲ್ಲಾ ದೃಶ್ಯಗಳು ಕಣ್ಣಮುಂದೆ ಬಂದು ಹೋಗುತ್ತವೆ, ಆನಂತರ ನಮ್ಮೂರಿಗೆ ಹೋಗಿ ಒಂದು ವಾರ ಕಳೆದರೂ ಕಾರ್ಯಕ್ರಮದ ಬಗ್ಗೆ ಎಲ್ಲರೊಂದಿಗೆ ಹೇಳಿಕೊಂಡು ಎಲ್ಲಾ ಫೋಟೋಗಳನ್ನ ಸ್ಟೇಟಸ್ ನಲ್ಲಿ ಹಾಕಿಕೊಂಡು ಸಂಭ್ರಮಿಸುತ್ತೇವೆ.
ಪ್ರತಿವರ್ಷ ವಾರ್ಷಿಕೊತ್ಸವ ಸಮಾರಂಭ ಜುಲೈ ತಿಂಗಳಲ್ಲಿ ನಡೆದರೂ ಅರ್ಧ ವರ್ಷದಲ್ಲಿ ಅಂದರೆ ನವಂಬರ್, ಡಿಸೆಂಬರ್ ತಿಂಗಳಿನಲ್ಲಿ ಒಂದು “ಸ್ನೇಹಕೂಟ” ಕಾರ್ಯಕ್ರಮ ನಡೆಯುತ್ತಿತ್ತು, ಆದರೆ ಈ ಬಾರಿ ಜನವರಿ 18 ರಂದು ತುಮಕೂರಿನ ದೇವರಾಯನದುರ್ಗದಲ್ಲಿ ಆಯೋಜಿಸಲಾಗಿದ್ದ “ಸ್ನೇಹಕೂಟ” ಕಾರ್ಯಕ್ರಮ ಅನಿವಾರ್ಯ ಕಾರಣಗಳಿಂದ ರದ್ದಾಗಿದ್ದು, ನಮಗೆಲ್ಲಾ ನಿಜಕ್ಕೂ ನಿರಾಶೆ ತಂದಿತು.
ಆದರೂ ಪರವಾಗಿಲ್ಲ, ಈ ಸಾಲಿನ ಜುಲೈ-5 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕನ್ನಡ “ಕಥಾಗುಚ್ಚ” ಸಾಹಿತ್ಯ ಸಂಘಟನೆಯ ವಾರ್ಷಿಕೋತ್ಸವ ಸಮಾರಂಭ ನಮ್ಮಲ್ಲಿ ನೂರುಪಟ್ಟು ಹುಮ್ಮಸ್ಸನ್ನು ಹೆಚ್ಚಿಸಿದ್ದು, ಆದಷ್ಟು ಬೇಗ ಕಥಾಗುಚ್ಚದ ಎಲ್ಲಾ ಗೆಳೆಯ-ಗೆಳತಿಯರನ್ನು ಭೇಟಿ ಮಾಡಿ, ಖುಷಿಖುಷಿಯಿಂದ ಸಂಭ್ರಮಿಸುವಂತಹ ಆ ಭಾಗ್ಯ ನಮ್ಮನಿಮ್ಮೆಲ್ಲರದಾಗಲಿ.
ಲೇಖಕರು : ಆಲೂರು ಹನುಮಂತರಾಯಪ್ಪ, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು
