
ಹಿರಿಯೂರು :
ಸುಧಾಕರ್ ರವರು ನನ್ನ ಆಪ್ತ ಸ್ನೇಹಿತರು, ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರು ನಮ್ಮನ್ನು ಅಗಲುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ, ಆಸ್ಪತ್ರೆಗೆ ದಾಖಲಾಗುವ ಮುನ್ನ ಅವರು ಅತ್ಯಂತ ಆತ್ಮವಿಶ್ವಾಸದಿಂದ ಇದ್ದರು, ಕಾಲಿನ ಸಮಸ್ಯೆ ಸರಿಪಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಆಸ್ಪತ್ರೆಗೆ ಹೋಗಿದ್ದರು ಆದರೆ ಕೊನೆಹಂತದಲ್ಲಿ ಶ್ವಾಸಕೋಶದ ಸೋಂಕಿಗೆ ಒಳಗಾದ ಕಾರಣ ಆದರಿಂದ ಗುಣಮುಖರಾಗದೆ ಇಹಲೋಕ ತ್ಯಜಿಸಿದ್ದಾರೆ ಎಂಬುದಾಗಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ನೆಹರು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾದ ಡಿ.ಸುಧಾಕರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ತಮ್ಮ ಆಪ್ತ ಗೆಳೆಯನನ್ನು ನೆನೆದು ಕಣ್ಣೀರು ಹಾಕಿದರು.
ಸಚಿವ ಡಿ.ಸುಧಾಕರ್ ಅವರು ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿಗಾಗಿ ಅದರಲ್ಲೂ ವಿಶೇಷವಾಗಿ ರೈತರ ಬದುಕಿನಲ್ಲಿ ಬದಲಾವಣೆ ತರಲು ನಿರಂತರವಾಗಿ ಶ್ರಮಿಸಿದವರು, ಈ ಭಾಗದ ರೈತರ ಹಿತ ದೃಷ್ಟಿಯಿಂದ ಭದ್ರಾ ಮೇಲ್ದಂಡೆ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರಲು ಶ್ರಮಿಸಿದ್ದರು. ಪರೀಕ್ಷಾರ್ಥ ನೀರು ಹರಿವಿನ ವೇಳೆ ನೀರು ಬಿಡಿಸುವಲ್ಲಿ ಅವರ ಪಾತ್ರ ದೊಡ್ಡದಿದೆ,
ವೈಜಂಕ್ಷನ್ ಬಳಿಯ ದೀರ್ಘಕಾಲದ ಸಮಸ್ಯೆ ಬಗೆಹರಿಸಲು ಶಾಸಕರನ್ನು ಒಟ್ಟುಗೂಡಿಸಿ ಹೋರಾಟ ಮಾಡಿದ್ದ ಅವರು ಜಾತಿ ಧರ್ಮದ ಭೇದವಿಲ್ಲದೆ ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡಿದ್ದರು, ಸುಧಾಕರ್ ಅವರ ಸಾವು ಪಕ್ಷ ಹಾಗೂ ಸರ್ಕಾರಕ್ಕೆ ತುಂಬಲಾರದ ನಷ್ಟವಾಗಿದೆ ಸುಧಾಕರ್ ಅವರ ಕುಟುಂಬಕ್ಕೆ ಸರ್ಕಾರ ಹಾಗೂ ಪಕ್ಷ ಸಂಪೂರ್ಣ ಬೆಂಬಲವಾಗಿ ನಿಲ್ಲಲಿದೆ ಎಂಬುದಾಗಿ ಹೇಳಿದರು.
ಇದೇ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಡಿ.ಕೆ.ಶಿವಕುಮಾರ್ ಮೊಬೈಲ್ ಗೆ ಕರೆ ಮಾಡಿ ಸಚಿವ ಡಿ.ಸುಧಾಕರ್ ಅವರ ಸಾವಿನ ಬಗ್ಗೆ ಸಂತಾಪ ಸೂಚಿಸಿದ ಅವರು ಡಿ.ಸುಧಾಕರ್ ಪುತ್ರ ಸುಹಾಸ್ ಅವರಿಗೆ ಸಾಂತ್ವನ ಹೇಳಿದರು.
ಚಿತ್ರದುರ್ಗ ಜಿಲ್ಲೆ ಬಿಜೆಪಿ ಸಂಸದ ಗೋವಿಂದಕಾರಜೋಳರವರು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ಆಘಾತವಾಗಿದೆ, ಇವರ ನಿಧನದ ಸುದ್ದಿಯನ್ನು ನಂಬಲು ಅಸಾಧ್ಯವಾಗುತ್ತಿದೆ, ಸುಧಾಕರ್ ಅವರು ಒಬ್ಬ ಸಜ್ಜನ ರಾಜಕಾರಣಿ, ಸಮಾಜದಲ್ಲಿ ಎಲ್ಲರೂ ಪ್ರೀತಿಗೆ ಪಾತ್ರರಾಗಿದ್ದವರು ಇಂತಹ ಜನಪ್ರಿಯ ವ್ಯಕ್ತಿ ಇಂದು ನಮ್ಮನ್ನು ಅಗಲಿರುವುದು ಇಡೀ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಸಂಸದ ಗೋವಿಂದಖಾರಜೋಳ, ಸಚಿವರಾದ ಶಿವರಾಜ್ ತಂಗಡಗಿ, ಶಾಸಕರುಗಳಾದ ರಘುಮೂರ್ತಿ, ವೀರೇಂದ್ರಪಪ್ಪಿ, ಬಿ.ಜಿ.ಗೋವಿಂದಪ್ಪ, ವಿಧಾನಪರಿಷತ್ ಸದಸ್ಯರುಗಳಾದ ಡಿ.ಟಿ.ಶ್ರೀನಿವಾಸ್, ರವಿಕುಮಾರ್, ಕೆ.ಎಸ್.ನವೀನ್, ಮಾಜಿ ಸಚಿವರುಗಳಾದ ಹೆಚ್.ಆಂಜನೇಯ, ಮಾದುಸ್ವಾಮಿ, ಏಕಾಂತಪ್ಪ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಪೂರ್ಣಿಮಾಶ್ರೀನಿವಾಸ್, ಶ್ರೀಇಮ್ಮಡಿಸಿದ್ದೇಶ್ವರಸ್ವಾಮೀಜಿ, ಶ್ರೀಬಸವನಾಗೀದೇವ ಸ್ವಾಮೀಜಿ, ಶ್ರೀಬಸವಕುಮಾರ ಸ್ವಾಮೀಜಿ, ಶ್ರೀಬಸವಪ್ರಭುಸ್ವಾಮೀಜಿ, ಶ್ರೀಬಸವಾನಂದಸ್ವಾಮೀಜಿ, ಜಿಲ್ಲಾಧಿಕಾರಿ ವೆಂಕಟೇಶ್, ಐಜಿಪಿ ರವಿಕಾಂತೇಗೌಡ, ಎಸ್.ಪಿ.ಗಳಾದ ರಂಜಿತ್ ಕುಮಾರ್, ಶೇಖರ್, ಸಿಇಓ ಡಾ.ಎಸ್.ಆಕಾಶ್, ಇಡಿಸಿ ಬಿ.ಟಿ.ಕುಮಾರಸ್ವಾಮಿ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಸೇರಿದಂತೆ ಸಚಿವ ಡಿ.ಸುಧಾಕರ್ ರವರ ಕುಟುಂಬಸ್ಥರು ಹಾಗೂ ಕಾಂಗ್ರೆಸ್ ನ ಅನೇಕ ಗಣ್ಯರು ಆಗಮಿಸಿ, ಸಚಿವ ಡಿ.ಸುಧಾಕರ್ ರವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
