
ಹಿರಿಯೂರು :
ಕನ್ನಡ ಭಾಷೆಗೆ 2,000 ವರ್ಷಗಳ ಇತಿಹಾಸ ಹೊಂದಿದ್ದು, ಕನ್ನಡ ಭಾಷೆಯು ತನ್ನದೇ ಆದ ಶ್ರೇಷ್ಠತೆಯನ್ನು ಹೊಂದಿದೆ, ಇಂತಹ ಕನ್ನಡ ನಾಡಿನ ನೆಲ-ಜಲ, ಸಂಪತ್ತು ಭಾಷೆ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂಬುದಾಗಿ ಯಜ್ಞವಲ್ಕ್ಯ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಟಿ.ಸುರೇಶ್ ಹೇಳಿದರು.
ತಾಲೂಕಿನ ಭೀಮನ ಬಂಡೆ ಗ್ರಾಮದ ಯಜ್ಞವಲ್ಕ್ಯ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಯಜ್ಞವಲ್ಕ ವಿದ್ಯಾ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿಯ ಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸಲು 1915 ಮೇ 5 ರಂದು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಮಿರ್ಜಾ ಇಸ್ಮಾಯಿಲ್, ಸರ್. ಎಂ.ವಿಶ್ವೇಶ್ವರಯ್ಯ ಜೊತೆಗೂಡಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದರು, ಅಂದಿನಿಂದ ಇಲ್ಲಿಯವರೆಗೆ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ತಾಲೂಕು ಘಟಕ, ಜಿಲ್ಲಾ ಘಟಕವನ್ನು ಆರಂಭಿಸಿದೆ,
ಈ ಮೂಲಕ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಈ ಯೋಜನೆ ಮಾಡುವ ಮೂಲಕ ಸ್ಥಳೀಯ ಸಾಹಿತಿಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸಾಹಿತ್ಯ ಪರಿಷತ್ ಮಾಡುತ್ತಾ ಬಂದಿದೆ ಜೊತೆಗೆ ಯುವ ಬರಹಗಾರರಿಗೆ ಕವಿಗೋಷ್ಠಿ ವಿಚಾರ ಸಂಕಿರಣ ಹೀಗೆ ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂಬುದಾಗಿ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಸುದೀರ್ಘವಾದ ಇತಿಹಾಸವನ್ನು ಹೊಂದಿದ್ದು ಹೆಚ್.ವಿ.ನಂಜುಂಡಯ್ಯ ಇವರಿಂದ ಹಿಡಿದು ಈಗಿನ ಮಹೇಶ್ ಜೋಶಿಯವರೆಗೂ ಸಾಹಿತಿಗಳು ಬರಹಗಾರರು ಕನ್ನಡ ಪರ ಸಂಘಟಕರು ಪತ್ರಕರ್ತರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ,
ಚಂಪಾ ಆರ್.ಕೆ.ನಲ್ಲೂರ್ ಪ್ರಸಾದ್ ರವರ ಅವಧಿಯಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೊಡಬೇಕೆಂದು ಹೋರಾಟಗಳು ಆರಂಭವಾದವು, 2009 ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತು ಪುಸ್ತಕ ಸಂತೆ, ಗ್ರಾಮ ಸಿರಿ, ಕವಿಗೋಷ್ಠಿ, ಹನಿಗವನ, ಗೋಷ್ಠಿಗಳು ಹೀಗೆ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳು ಸಾಹಿತ್ಯ ಪರಿಷತ್ತಿನಿಂದ ನಡೆದುಬಂದಿದೆ,
81 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿಗೆ ದಲಿತ ಕವಿ ಡಾ.ಸಿದ್ಧಲಿಂಗಯ್ಯ ಅವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಸ್ಥಳ ಸಮುದಾಯದವರಿಗೆ ಅವಕಾಶ ಮಾಡಿಕೊಟ್ಟಂತೆ ಕೊಟ್ಟಂತಹ ಕೀರ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿ.ರಾಮಚಂದ್ರಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಸದಸ್ಯರಾದ ಹರ್ತಿಕೋಟೆ ಮಹಾಸ್ವಾಮಿ, ಯಜ್ಞವಲ್ಕ್ಯ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಜಿ.ಶ್ರೀನಿವಾಸ್ ಮೂರ್ತಿ, ಯು.ಹರ್ಷ, ಹೆಚ್.ಆರ್.ಶಂಕರ್, ಮಹಂತೇಶ್, ನರಸಿಂಹಮೂರ್ತಿ, ಸುಗುಣ, ವರದೇಗೌಡ, ಸುರೇಶ್, ನವೀನ್, ಪ್ರಭು, ಹಂಸಶಂಕರ್, ಹಾಗೂ ಇತರರು ಉಪಸ್ಥಿತರಿದ್ದರು.
ಇದೇ ವೇಳೆ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ, ಗೌರವಿಸಲಾಯಿತು.
