October 6, 2025
000001

ಅವರ ತ್ಯಾಗ, ಪರಿಶ್ರಮ ಅತ್ಯಂತ ಶ್ಲಾಘನೀಯವಾದದ್ದು

ಚಿತ್ರದುರ್ಗಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್

ಹಿರಿಯೂರು :

ಶಿಕ್ಷಕರು ಸಮಾಜವನ್ನು ರೂಪಿಸುವಂತಹ ಅಪೂರ್ವ ಶಿಲ್ಪಿಗಳು, ಅವರ ತ್ಯಾಗ, ಪರಿಶ್ರಮ ಅತ್ಯಂತ ಶ್ಲಾಘನೀಯವಾಗಿದ್ದು, ನಮ್ಮ ಜೀವನದಲ್ಲಿ ಗುರುಗಳ ಸ್ಥಾನ ಯಾವಾಗಲೂ ಶ್ರೇಷ್ಠವಾದದ್ದು, ಅವರ ಮಾರ್ಗದರ್ಶನವೇ ನಮ್ಮ ಭವಿಷ್ಯವನ್ನು ರೂಪಿಸುತ್ತದೆ, ಇಂತಹ ಗುರುತರ ಜವಾಬ್ದಾರಿ ಹೊತ್ತಿರುವ ಶಿಕ್ಷಕರು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಕರೆ ನೀಡಿದರು.

ನಗರದ ಗುರುಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಶಿಕ್ಷಕರ ದಿನಾಚರಣೆ ಸಮಿತಿ ಹಿರಿಯೂರು, ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳು ಹಾಗೂ ಶಾಲೆಗಳಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾದರೆ ಶಿಕ್ಷಕರು ಸದಾ ಕ್ರಿಯಾಶೀಲರಾಗಿ ಕೆಲಸ ಮಾಡಬೇಕಲ್ಲದೆ, ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಹೊಸಹೊಸ ವಿನೂತನ ವಿಧಾನಗಳನ್ನು ಶಾಲಾ ಬೋಧನೆಯಲ್ಲಿ ಅಳವಳಡಿಕೊಳ್ಳುವ ಮೂಲಕ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರಲ್ಲದೆ,

ಸರ್ಕಾರಿ ಶಾಲೆಗಳ ಅಭಿವೃದ್ಧಿಯಾದಾಗ ಮಾತ್ರ ಹಲವು ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ, ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ನಮ್ಮ ಸರ್ಕಾರಿ ಶಾಲೆಗಳು ಹಾಗೂ ಶಿಕ್ಷಣದ ಅಭಿವೃದ್ಧಿಗಾಗಿ ಯಾವುದೇ ಸೌಲಭ್ಯ ಅಗತ್ಯವಿದ್ದರೂ ನಿಮ್ಮ ಬೆಂಬಲಕ್ಕೆ ನಾವು ಸದಾ ಸಿದ್ಧವಾಗಿದ್ದೇವೆ, ತಾಲ್ಲೂಕಿನಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ನಮ್ಮ ಶಿಕ್ಷಕ-ಶಿಕ್ಷಕಿಯರು ಮುಂದಾಗಬೇಕು ಎಂಬುದಾಗಿ ಹೇಳಿದರು.

ಅಂತರಾಷ್ಟ್ರೀಯಮಾನವ ಸಂಪನ್ಮೂಲ ತರಬೇತಿದಾರರಾದ ಡಾ.ಬಿ.ಎಸ್.ಗುರುದಕ್ಷಿಣ್ ಮಾತನಾಡಿ, ವಿಶ್ವವನ್ನು ಬೆಳಗಿಸುವ ಎಲ್ಲಾ ಉದ್ಯೋಗಗಳಿಗೆ ಶಿಕ್ಷಕರೇ ಆಧಾರವಾಗಿದ್ದು, ಒಬ್ಬ ಶ್ರೇಷ್ಠ ಶಿಕ್ಷಕ ಮಾತ್ರ ವಿದ್ಯಾರ್ಥಿಗಳ ಮನಸ್ಸು ಹಾಗೂ ಹೃದಯ ಮುಟ್ಟುವಂತೆ ಬೋಧಿಸುತ್ತಾನೆ, ಬಲವಿಲ್ಲದ ಮಕ್ಕಳನ್ನು ಬಲವಂತವಾಗಿ ತಬ್ಬಿಕೊಂಡು ಬಲಿಷ್ಠನಾಗಿ ಮಾಡುವ ಶಕ್ತಿ ನಮ್ಮ ಶಿಕ್ಷಕರಿಗಿದೆ, ಇದನ್ನು ಸದ್ಭಳಕೆಮಾಡಿಕೊಳ್ಳಬೇಕು ಎಂಬುದಾಗಿ ಹೇಳಿದರು.

ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳಾದ ಡಾ.ಜಿ.ಕೆ.ಪ್ರಮೋದ್ ಮಾತನಾಡಿ, ಸಮಾಜದಲ್ಲಿ ಗುರುವಿನ ಸ್ಥಾನ ಅತ್ಯಂತ ಪವಿತ್ರವಾಗಿದ್ದು, ಗುರುವಿನಸ್ಥಾನದಲ್ಲಿ ನಿರ್ವಹಿಸುತ್ತಿರುವ ಶಿಕ್ಷಕರು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವತ್ತ ಗಮನಹರಿಸಬೇಕು, ಈ ನಿಟ್ಟಿನಲ್ಲಿ ಹೊಸಹೊಸ ಅವಿಷ್ಕಾರಗಳನ್ನು ಶಿಕ್ಷಣದಲ್ಲಿ  ಪರಿಚಯಿಸಬೇಕು ಎಂದರಲ್ಲದೆ,

ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಕೇವಲ ವೈದ್ಯವೃತ್ತಿ, ಎಂಜಿನಿಯರಿಂಗ್ ವೃತ್ತಿಗಳಿಗೆ ಸೀಮಿತಗೊಳಿಸದೇ ಐಎಎಸ್, ಐಪಿಎಸ್ ಪರೀಕ್ಷೆಗಳನ್ನು ಪಾಸು ಮಾಡುವ ಮೂಲಕ, ಆಡಳಿತಾತ್ಮಕ ಹುದ್ದೆಗಳನ್ನು ಪಡೆದು, ಸಮಾಜಮುಖಿಯಾಗಿ ಜನಪರವಾಗಿ ಕಾರ್ಯನಿರ್ವಹಿಸಬೇಕೆಂಬ ಕಲ್ಪನೆಯನ್ನು ಮಕ್ಕಳಲ್ಲಿ ಬೆಳೆಸುವ ಜೊತೆಗೆ ಇದಕ್ಕೆ ಸೂಕ್ತ ವೇದಿಕೆಯನ್ನು ಶಾಲೆಗಳಲ್ಲಿ ಕಲ್ಪಿಸಿಕೊಡಬೇಕು ಎಂಬುದಾಗಿ ಹೇಳಿದರು.

ಆರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಗುರುಭವನದವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಬಣ್ಣಬಣ್ಣದ ಹೂಗಳಿಂದ ಅಲಂಕಾರಗೊಂಡ ಭವ್ಯ ರಥದಲ್ಲಿ ಡಾ.ಸರ್ವಪಲ್ಲಿರಾಧಾಕೃಷ್ಣನ್ ರವರ ಭಾವಚಿತ್ರದ ಮೆರವಣಿಗೆಯನ್ನು ಘೋಷಣೆಗಳು ಹಾಗೂ ವಾದ್ಯ ತಂಡಗಳ ಮೂಲಕ ಅದ್ದೂರಿಯಾಗಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ-ಶಿಕ್ಷಕಿಯರನ್ನು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳಾದ ಡಾ.ಜಿ.ಕೆ.ಪ್ರಮೋದ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸಿ.ಮಹೇಶ್ವರರೆಡ್ಡಿ, ಕ್ಷೇತ್ರ ಸಮನ್ವಯ ಅಧಿಕಾರಿ ಈ.ತಿಪ್ಪೇರುದ್ರಪ್ಪ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ರವೀಂದ್ರನಾಯ್ಕ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ರಮೇಶ್, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷೆ ಶ್ರೀಮತಿ ವಿ.ಭಾಗ್ಯ, ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಕೆ.ಆರ್.ತಿಪ್ಪೇಸ್ವಾಮಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಲೋಹಿತ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಅಶೋಕ್, ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಶ್ರೀಮತಿ ಲೋಕಮ್ಮ, ಉಪಾಧ್ಯಕ್ಷೆ ಶ್ರೀಮತಿನಾಗರತ್ನ, ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಡಿ.ಸಣ್ಣಪ್ಪ, ಮಮತಾ, ಸದಸ್ಯರುಗಳಾದ ಈರಲಿಂಗೇಗೌಡ, ಹಾಗೂ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜನಕರುಗಳು, ಬಿ.ಆರ್.ಪಿಗಳು ಹಾಗೂ ಸಿ.ಆರ್.ಪಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಿಬ್ಬಂದಿವರ್ಗದವರು ಹಾಗೂ ತಾಲ್ಲೂಕಿನ ಸಮಸ್ತ ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡಿದ್ದರು.

ಆರಂಭದಲ್ಲಿ ಕ್ಷೇತ್ರ ಸಂಯೊಜನಾಧಿಕಾರಿ ಶಿವಾನಂದ್ ಎಲ್ಲರನ್ನು ಕಾರ್ಯಕ್ರಮಕ್ಕೆ  ಸ್ವಾಗತಿಸಿದರು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕರಾದ ಗಿರೀಶ್, ಶ್ರೀಮತಿ ಭಾಗ್ಯ, ಶ್ರೀಮತಿ ರಾಧಾ ಕಾರ್ಯಕ್ರಮವನ್ನು ನಿರೂಪಿಸಿದರು.

About The Author

Leave a Reply

Your email address will not be published. Required fields are marked *