

ಹಿರಿಯೂರು:
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೌರಕಾರ್ಮಿಕರ ಸೇವೆ ಅತ್ಯಮೂಲ್ಯವಾಗಿದ್ದು, ಸೂರ್ಯೋದಯಕ್ಕೆ ಮುಂಚೆಯೇ ಎದ್ದುಬಂದು ನಗರವನ್ನು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರಿಗೆ ಯಾವುದೇ ರೀತಿಯ ರೋಗಗಳು ಹರಡದಂತೆ ನೋಡಿಕೊಳ್ಳುವ ಪೌರಕಾರ್ಮಿಕರ ಸೇವೆಗೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದಾಗಿ ತಾಲ್ಲೂಕು ತಹಶೀಲ್ದಾರ್ ಸಿದ್ಧೇಶ್ ಹೇಳಿದರು.
ನಗರದ ನಗರಸಭೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್ ಅವರು ಮಾತನಾಡಿ, ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುವ ನಿಟ್ಟಿನಲ್ಲಿ ತಮ್ಮ ಆರೋಗ್ಯವನ್ನು ಸಹ ಲೆಕ್ಕಿಸದೇ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಸೇವೆ ನಿಜಕ್ಕೂ ಅಮೂಲ್ಯವಾದುದು, ಈ ಪೌರಕಾರ್ಮಿಕರಿಗೆ ನಾವು-ನೀವೆಲ್ಲರೂ ಅಭಾರಿಗಳಾಗಿರಬೇಕು ಎಂಬುದಾಗಿ ಅವರು ಹೇಳಿದರು.

ನಗರಸಭೆ ಅಧ್ಯಕ್ಷ ಆರ್.ಬಾಲಕೃಷ್ಣ ಮಾತನಾಡಿ, ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೇವಲ ಪೌರಕಾರ್ಮಿಕರ ಜವಾಬ್ದಾರಿಯಲ್ಲ, ಸಾರ್ವಜನಿಕರು ಸಹ ಪೌರಕಾರ್ಮಿಕರ ಸ್ವಚ್ಛತಾ ಕೆಲಸಕ್ಕೆ ಕೈಜೋಡಿಸಿದಾಗ ಮಾತ್ರ ನಮ್ಮ ನಗರವನ್ನು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸುಂದರವಾಗಿಡಲು ಸಾಧ್ಯ ಎಂಬುದಾಗಿ ಹೇಳಿದರು.

ಈ ಸಂದರ್ಭದಲ್ಲಿ, ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಮಂಜುಳಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಶ್ರೀಮತಿ ಮಮತಾ, ಸಣ್ಣಪ್ಪ, ವಿಠ್ಠಲಪಾಂಡುರಂಗ, ಮಾಜಿ ಅಧ್ಯಕ್ಷರುಗಳಾದ ಶಿವರಂಜಿನಿಯಾದವ್, ಅಜಯ್ ಕುಮಾರ್, ಸದಸ್ಯರುಗಳಾದ ಜಿ.ಎಸ್.ತಿಪ್ಪೇಸ್ವಾಮಿ, ಅಂಬಿಕಾ ಆರಾಧ್ಯ, ಶ್ರೀಮತಿ ಕವಿತಾ, ವಿಶಾಲಾಕ್ಷಮ್ಮ ಹಾಗೂ ರಮೇಶ್, ಜನಾರ್ಧನ್, ಸೇರಿದಂತೆ ನಗರಸಭೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.