
ಹಿರಿಯೂರು :
ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅವರ ಪ್ರತಿಭೆಗೆ ತಕ್ಕಂತೆ ಕ್ರೀಡಾವಿಭಾಗದಲ್ಲಿ ಉತ್ತಮ ಗುಣಮಟ್ಟದ ತರಬೇತಿ ನೀಡುವ ಮೂಲಕ ನಮ್ಮ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ನಮ್ಮ ಶಾಲೆಗೆ ಹೆಸರು ತಂದುಕೊಟ್ಟ ಕೀರ್ತಿ ನಮ್ಮ ಶಾಲೆಯ ದೈಹಿಕ ಶಿಕ್ಷಕರಾದ ಶಿವಶಂಕರ್ ಮಠದ್ ರವರಿಗೆ ಸಲ್ಲುತ್ತದೆ ಎಂಬುದಾಗಿ ವಾಗ್ದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕೆ.ವಿ.ಅಮರೇಶ್ ಹೇಳಿದರು.
ನಗರದ ವಾಗ್ದೇವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಗ್ದೇವಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಶಿವಶಂಕರ್ ಮಠದ್ ರವರ ವಯೋನಿವೃತ್ತಿ ಹಾಗೂ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.

ತಮ್ಮ ಕೆಲಸದ ಆರಂಭದ ದಿಗಳಿಂದಲೂ ನಿವೃತ್ತಿಯ ದಿನದವರೆಗೆ ಬಹುಮುಖ ಪ್ರತಿಭೆಯಾಗಿ ಕಾರ್ಯನಿರ್ವಹಿಸಿದ ಶಿವಶಂಕರ್ ಮಠದ್ ರವರು ಇದೀಗ ವಯೋನಿವೃತ್ತಿ ಹೊಂದುತ್ತಿದ್ದು, ನಿವೃತ್ತಿಯ ನಂತರವೂ, ಅವರು ಇಷ್ಟಪಟ್ಟರೆ ನಮ್ಮ ವಿದ್ಯಾಸಂಸ್ಥೆಯಲ್ಲಿ ದೈಹಿಕ ಶಿಕ್ಷಕರ ಸೇವೆಯನ್ನು ಮುಂದುವರೆಸುವ ಮೂಲಕ ನಮ್ಮ ವಿದ್ಯಾರ್ಥಿಗಳಿಗೆ ಮುಂದೆಯೂ ಮಾರ್ಗದರ್ಶನ ನೀಡಬಹುದು ಎಂಬುದಾಗಿ ಅವರು ಹೇಳಿದರು.

ಶೈಕ್ಷಣಿಕ ಕಾರ್ಯದರ್ಶಿ ಆರ್.ಪ್ರಕಾಶ್ ಕುಮಾರ್ ಮಾತನಾಡಿ, ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ಮೂಲಕ ಅವರನ್ನು ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಲು ಉತ್ತಮ ತರಬೇತಿ ನೀಡಿ, ನಮ್ಮ ವಿದ್ಯಾರ್ಥಿಗಳು ನ್ಯಾಷಿನಲ್ ಲೆವೆಲ್ ನಲ್ಲಿ ಸ್ಪರ್ಧಿಸಲು ಮಾರ್ಗದರ್ಶನ ನೀಡಿದ ಶಿವಶಂಕರ್ ಮಠದ್ ರವರ ಕಾರ್ಯತತ್ಪರತೆ ನಿಜಕ್ಕೂ ಶ್ಲಾಘನೀಯ ಎಂಬುದಾಗಿ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕರಾದ ರವೀಂದ್ರನಾಯ್ಕ ರವರು ಮಾತನಾಡಿ, ನಮ್ಮ ಇಲಾಖೆ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಜೊತೆಗೆ ಹೋಬಳಿಮಟ್ಟ, ತಾಲ್ಲೂಕುಮಟ್ಟದ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಶಿವಶಂಕರ್ ಮಠದ್ ರವರ ಪಾತ್ರ ಬಹಳ ಮುಖ್ಯವಾಗಿದ್ದು, ಇವರ ಕರ್ತವ್ಯನಿಷ್ಠೆಯನ್ನು ನಿಜಕ್ಕೂ ನಮ್ಮ ಶಿಕ್ಷಣ ಇಲಾಖೆ ಅಭಿನಂದಿಸುತ್ತದೆ ಎಂಬುದಾಗಿ ಹೇಳಿದರು.
ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಮಾತನಾಡಿ, ವಯೋನಿವೃತ್ತಿ ಜೀವನದ ಅತ್ಯಮೂಲ್ಯ ಕ್ಷಣವಾಗಿದ್ದು, ಅವರ ಸಾಧನೆಯನ್ನು ಅದು ಸಾಬೀತುಪಡಿಸುವ ದಿನವಾಗಿದೆ, ಇಂತಹ ವಯೋನಿವೃತ್ತಿ ಹೊಂದುತ್ತಿರುವ ಶಿವಶಂಕರ್ ಮಠದ್ ಬಹುಮುಖ ಪ್ರತಿಭೆಯಾಗಿದ್ದು, ಪತ್ರಿಕಾರಂಗದಲ್ಲಿಯೂ ಅವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ, ಆಡಳಿತಮಂಡಳಿಯ ಸಹಕಾರದಿಂದ ಉತ್ತಮ ಯಶಸ್ಸು ಪಡೆದಿರುವ ಇವರ ನಿವೃತ್ತಿ ಜೀವನ ಯಶಸ್ವಿಯಾಗಿರಲಿ ಎಂಬುದಾಗಿ ಶುಭಹಾರೈಸಿದರು.

ರಾಜ್ಯ ರೈತಸಂಘದ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಮಾತನಾಡಿ, ಬಹುಮುಖ ಪ್ರತಿಭೆಯ ಶಿವಶಂಕರ್ ಮಠದ್ ರವರು ಉತ್ತಮ ಗಾಯಕರೂ ಆಗಿದ್ದು, ಹಿರಿಯೂರಿನಲ್ಲಿ ನಡೆಯುವ ಸಾಹಿತ್ಯ ಪರಿಷತ್ ಸಮ್ಮೇಳನ, ರಾಷ್ಟ್ರೀಯಹಬ್ಬಗಳಲ್ಲಿ ರೈತಗೀತೆ, ನಾಡಗೀತೆಯನ್ನು ಬಹಳ ಮಧುರವಾಗಿ ಹಾಡುವ ಗಾಯಕರಾಗಿದ್ದರು, ಅಲ್ಲದೆ ಮಿತಮಾತಿನ ಉತ್ತಮ ಬರಹಗಾರರಾಗಿ, ಪತ್ರಕರ್ತರಾಗಿಯೂ ಸೇವೆಸಲ್ಲಿಸುತ್ತಿದ್ದು, ಇವರ ನಿವೃತ್ತಿಯ ಜೀವನ ಸುಖಮಯವಾಗಿರಲಿ ಎಂಬುದಾಗಿ ಹಾರೈಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ಶರಣಪ್ಪ, ನಿವೃತ್ತ ಮುಖ್ಯಶಿಕ್ಷಕರಾದ ಪ್ರಾಣೇಶ್, ನ್ಯೂಡೈಮಂಡ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷರಾದ ಯೋಗಾನಂದ್, ಶಿಕ್ಷಕರಾದ ಪದ್ಮನಾಭ್, ಶ್ರೀನಿವಾಸ್, ಕನ್ನಡಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಜಿ.ರಂಗಸ್ವಾಮಿ, ಇಂಗ್ಲೀಷ್ ಶಿಕ್ಷಕ ಚಂದ್ರಶೇಖರ್, ಸೇರಿದಂತೆ ಹಿರಿಯ ವಿದ್ಯಾರ್ಥಿಗಳಾದ ಶಿವಕುಮಾರ್ ಹಾಗೂ ಶ್ರಾವಣಿ ಶಿವಶಂಕರ್ ಮಠದ್ ರವರ ಬಗ್ಗೆ ಪ್ರಶಂಸೆಯ ನುಡಿಗಳನ್ನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಗ್ದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕೆ.ವಿಅಮರೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಾಗ್ದೇವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಶ್ರೀಧರ್, ಶೈಕ್ಷಣಿಕ ಕಾರ್ಯದರ್ಶಿ ಆರ್.ಪ್ರಕಾಶ್ ಕುಮಾರ್, ಶಾಲೆಯ ಮುಖ್ಯಶಿಕ್ಷಕ ಶರಣಪ್ಪ, ತಾಲ್ಲೂಕು ಪತ್ರಕರ್ತರಸಂಘದ ಅಧ್ಯಕ್ಷರಾದ ಎಂ.ಎಲ್.ಗಿರಿಧರ್, ಪತ್ರಕರ್ತರಾದ ಎಂ.ರವೀಂದ್ರನಾಥ್, ಪ್ರಕಾಶ್ ಬಬ್ಬೂರು, ಸಕ್ಕರರಂಗಸ್ವಾಮಿ, ಚಮನ್ ಶರೀಫ್, ಶಿವಾನಂದ್, ಸೇರಿದಂತೆ ಶಿವಶಂಕರ್ ಮಠದ್ ರವರ ಕುಟುಂಬಸ್ಥರು, ಹಾಗೂ ದೈಹಿಕಶಿಕ್ಷಕರು, ಅವರ ಅಭಿಮಾನಿಗಳು, ಹಾಗೂ ಬಂಧುಗಳು, ವಾಗ್ದೇವಿ ವಿದ್ಯಾಸಂಸ್ಥೆಯ ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
