April 11, 2026
000001

ಹಿರಿಯೂರು:

ರಂಗಭೂಮಿ ಕಲೆ ಕೇವಲ ಕಲೆಯಲ್ಲ, ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ, ಪರಂಪರೆಯ ಪ್ರತಿಬಿಂಬವಾಗಿದ್ದು, ಇಂತಹ ಕಲೆಯನ್ನು ಉಳಿಸಿ, ಬೆಳೆಸುವ ಹೊಣೆ ನಮ್ಮ ಮೇಲಿದೆ ಎಂಬುದಾಗಿ ಹಿರಿಯ ರಂಗಕಲಾವಿದ ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಜಿ.ಡಿ. ತಿಮ್ಮಯ್ಯ ಹೇಳಿದರು.

ನಗರದ ವೇದಾವತಿ ಬಡಾವಣೆಯ ಶ್ರೀಕೃಷ್ಣದೇವಾಲಯದ ಆವರಣದಲ್ಲಿ ಕಳವಿಭಾಗಿ ಶ್ರೀರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾ ಸಂಘ(ರಿ), ಸಕ್ಕರ ಶ್ರೀ ಕೃಷ್ಣ ದೇವಸ್ಥಾನ ಸಮಿತಿ ಇವರುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ವಿಶ್ವರಂಗಭೂಮಿ ದಿನಾಚರಣೆ” ಕಾರ್ಯಕ್ರಮವನ್ನು ಉದ‍್ಘಾಟಿಸಿ, ಅವರು ಮಾತನಾಡಿದರು.

ಜಾಗತೀಕರಣ, ಆಧುನೀಕರಣ ನಗರೀಕರಣದ ಪರಿಣಾಮವಾಗಿ ದೇಶೀಯ ಕಲೆಗಳಿಗೆ ಹೊಡೆತ ಬಿದ್ದಿದ್ದು, ರಂಗಭೂಮಿ ಕಲೆ ಮಾತ್ರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ, ಈ ಕಲೆಯನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಓ.ಮಂಜುನಾಥ್ ಮಾಳಿಗೆ ಮಾತನಾಡಿ, ರಂಗಭೂಮಿಗೆ ಕತೆ, ಸಂಭಾಷಣೆ, ಕಲಾವಿದರೆ ಜೀವಾಳ. ಕಲಾವಿದರು ಪಾತ್ರಗಳ ಮೂಲಕ ಕ್ರಿಯೆಗೆ  ಪ್ರತಿಕ್ರಿಯೆ ನೀಡುತ್ತಾರೆ. ಹಳ್ಳಿಗಳಲ್ಲಿ ಇಂದಿಗೂ ಹಬ್ಬ, ಹರಿದಿನ ಸುಗ್ಗಿ ಕಾಲದಲ್ಲಿ ನಾಟಕಗಳನ್ನು ನೋಡಬಹುದಾಗಿದೆ ಎಂದರು.

ಸ್ವಾಮಿವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಎಸ್.ಜಿ. ರಂಗಸ್ವಾಮಿ ಸಕ್ಕರ ಮಾತನಾಡಿ, ರಂಗಭೂಮಿ ಕಲಾವಿದರಿಗೆ ಸರ್ಕಾರ ಕೇರಳ ಮತ್ತು ಆಂಧ್ರಪ್ರದೇಶದ ಮಾದರಿಯಲ್ಲಿ 7,000 ಮತ್ತು 5,000 ರೂಗಳ ಮಾಶಾಸನ ಹೆಚ್ಚಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ರಂಗಭೂಮಿ ಕಲಾವಿದರಾದ ಚಿತ್ರಚಿತ್ ಯಾದವ್, ಕಳವಿಭಾಗಿ ಆರ್.ರಂಗನಾಥ್, ಪಿ.ತಿಮ್ಮಯ್ಯ ಬ್ಯಾಡರಹಳ್ಳಿ ಸಿ. ಪರಮೇಶ್ವರಪ್ಪ ಮಸ್ಕಲ್, ವಿಜಯವಾಣಿ  ಡಿ.ನಟರಾಜು, ಮದ್ದನಕುಂಟೆ. ಟಿ. ಪಾಂಡುರಂಗಪ್ಪಗುಳಗೊಂಡನಹಳ್ಳಿ, ಹರಿಹಬ್ಬೆಆನಂದಪ್ಪ, ಕೆ.ರಾಜಪ್ಪ ಮಸ್ಕಲ್ ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ಹಾಗೂ ಚಿಂತಕರಾದ ಕಾಮಣ್ಣ ವಹಿಸಿದ್ದರು.  ಕಾರ್ಯಕ್ರಮದಲ್ಲಿ ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ್ಯ ಜೆ.ನಿಜಲಿಂಗಪ್ಪ, ಕಾರ್ಯದರ್ಶಿ ಬಿ.ಟಿ.ಶಂಕರಲಿಂಗಯ್ಯ, ಹಾರ್ಮೋನಿಯಂ ವಾದಕ ಎಸ್.ಶಿವಲಿಂಗಪ್ಪ, ತಬಲಾವಾದಕರಾದ ವೈ.ಶಿವಲಿಂಗಪ್ಪ, ಸಿ.ಶ್ರೀನಿವಾಸ್, ಬಿ.ಟಿ.ಕುಮಾರಪ್ಪ, ಎಸ್.ರುದ್ರಯ್ಯ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *