
ಹಿರಿಯೂರು :
ಶ್ರೀರಾಮನು ಮೌಲ್ಯಗಳ ಸಂಕೇತವಾಗಿದ್ದು, ಶ್ರೀರಾಮನ ಸಹನೆ, ಸಂಸ್ಕೃತಿ, ತ್ಯಾಗಕ್ಕೆ ರಾಮನಿಗೆ ರಾಮನೇ ಸಾಟಿ, ಶ್ರೀರಾಮನ ಆದರ್ಶ ಗುಣಗಳನ್ನು ಇಂದಿನ ಯುವಜನತೆ ಅಳವಡಿಸಿಕೊಂಡಲ್ಲಿ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂಬುದಾಗಿ ಬ್ರಾಹ್ಮಣ ಸಮಾಜದ ಮುಖಂಡರಾದ ಎಂ.ಎಸ್.ರಾಘವೇಂದ್ರ ಹೇಳಿದರು.
ನಗರದ ಸತ್ಯನಾರಾಯಣಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ಸೇವಾ ಸಮಿತಿ ವತಿಯಿಂದ ರಾಮ ನವಮಿ ಪ್ರಯುಕ್ತ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ಕೂಡ ರಾಮರಾಜ್ಯದ ಕನಸು ಕಂಡಿದ್ದರು, ಮರ್ಯಾದ ಪುರುಷೋತ್ತಮ ಎಂದೇ ಕರೆಯಲ್ಪಡುವ ಶ್ರೀರಾಮದೇವರು ಸರ್ವರ ಸಂಕಷ್ಟಗಳನ್ನು ನಿವಾರಿಸುವ ಮೂಲಕ ನಾಡಿನೆಲ್ಲೆಡೆ ಉತ್ತಮ ಮಳೆ-ಬೆಳೆಯಾಗಿ ಸರ್ವರಿಗೂ ಸನ್ಮಂಗಳವನ್ನು ಉಂಟುಮಾಡಲಿ ಎಂಬುದಾಗಿ ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಸತ್ಯನಾರಾಯಣಸ್ವಾಮಿ ದೇವಾಲಯದಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಜಯಘೋಷಗಳೊಂದಿಗೆ ಸಾಗಿ, ಮತ್ತೆ ದೇವಸ್ಥಾನಕ್ಕೆ ವಾಪಸ್ಸು ಬಂದಿತು. ಈ ಮೆರವಣಿಗೆಯುದ್ದಕ್ಕೂ ಮಜ್ಜಿಗೆ ಪಾನಕ ಕೋಸಂಬರಿ ವಿತರಿಸಲಾಯಿತು.
ಈ ಮೆರವಣಿಗೆಯಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ಎಂ.ಎಸ್.ರಾಘವೇಂದ್ರ, ವೆಂಕಟೇಶ್ ದೀಕ್ಷಿತ್, ಡಾ. ರವಿಕಿರಣ್, ವಿ.ವಿಶ್ವನಾಥ್, ಎಂ.ವಿ.ಹರ್ಷ, ಎಂ.ಎನ್.ಗುರುಪ್ರಸಾದ್, ವಿಶ್ವೇಶ್ವರ ಉಡುಪ, ಸಂದೇಶ್ ಸೇರಿದಂತೆ ಬ್ರಾಹ್ಮಣ ಮುಖಂಡರುಗಳು ಪಾಲ್ಗೊಂಡಿದ್ದರು.
