April 11, 2026
00001

ಹಿರಿಯೂರು :                                                  

ತಾವು ಖರೀದಿಸುವ ಸರಕುಗಳು ಹಾಗೂ ಕಂಪನಿಗಳು ಒದಗಿಸುವ ಸೇವೆಗಳು ಗ್ರಾಹಕರಿಗೆ ತೃಪ್ತಿದಾಯಕವಾಗದಿದ್ದರೆ ಗ್ರಾಹಕರು ನ್ಯಾಯಾಲಯದ ಮೊರೆ ಹೋಗುವ ಮೂಲಕ ನ್ಯಾಯ ಪಡೆಯಬಹುದಾಗಿದೆ ಎಂಬುದಾಗಿ ಸಹಾಯಕ ಕಾನೂನು ನೆರವು ವಕೀಲರಾದ ಕೆ.ಆರ್.ಸೋಮು ಹೇಳಿದರು.

ನಗರದ ನಗರಸಭೆ ಸಭಾಂಗಣದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನ ಮತ್ತು ಜಲ ದಿನದ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಮತ್ತು ಅಭಿಯೋಜನ ಇಲಾಖೆ ನಗರಸಭೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಮತ್ತು ಒಳಚರಂಡಿ ಮಂಡಳಿ ಉಪವಿಭಾಗ ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಕಾನೂನು ಅರಿವು-ನೆರವು” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷರಾದ ಎಂ.ಆರ್.ರಂಗಸ್ವಾಮಿ ಮಾತನಾಡಿ, ಬಿತ್ತನೆ ಬೀಜ, ರಸಗೊಬ್ಬರದಂತಹ ಯಾವುದೇ ಪದಾರ್ಥಗಳನ್ನು ಖರೀದಿಸುವಾಗ ರೈತರು ಕಡ್ಡಾಯವಾಗಿ ಬಿಲ್ ಗಳನ್ನು ಪಡೆಯಬೇಕು, ಸೂಕ್ತ ದಾಖಲೆಗಳಿದ್ದರೆ ಮಾತ್ರ ರೈತರಿಗೆ ನ್ಯಾಯ ಒದಗಿಸಲು ಅನುಕೂಲವಾಗುತ್ತದೆ ಎಂಬುದಾಗಿ ಹೇಳಿದರು.

ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯ ಪಾಲಕ ಅಭಿಯಂತರ ಕೆ.ಎನ್.ಕುಸುಮಾ ಮಾತನಾಡಿ, ಗ್ರಾಹಕರಿಗೆ ತಮ್ಮ ಹಕ್ಕುಗಳು ಹಾಗೂ ಮಾರುಕಟ್ಟೆಯ ಮೋಸದ ಬಗ್ಗೆ ಜಾಗೃತಿ ಮೂಡಿಸಿದ ದಿನವನ್ನು ಗ್ರಾಹಕರ ದಿನವಾಗಿ ಆಚರಿಸಲಾಗುತ್ತಿದ್ದು, 2019ರಲ್ಲಿ ಜಾರಿಗೆ ಬಂದ ಕಾನೂನಿನ ಪ್ರಕಾರ 90ಲಕ್ಷದ ಅವ್ಯವಹಾರದ ಆರೋಪವನ್ನು ಜಿಲ್ಲಾ ಆಯೋಗಕ್ಕೆ, 1ಕೋಟಿಯಿಂದ 10 ಕೋಟಿವರೆಗೆ ಅವ್ಯವಹಾರ ರಾಜ್ಯಮಟ್ಟದ ಆಯೋಗಕ್ಕೆ, 10 ಕೋಟಿಗಿಂತ ಮೇಲ್ಪಟ್ಟ ಅವ್ಯವಹಾರಕ್ಕೆ ರಾಷ್ಟ್ರಮಟ್ಟದ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ ಎಂಬುದಾಗಿ ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಮಾತನಾಡಿ, ನೀರು ಅಮೂಲ್ಯವಾದ ಸಂಪತ್ತು, ಅದರ ರಕ್ಷಣೆ ನಮ್ಮೆಲ್ಲರ ಹೊಣೆ, ಹಿರಿಯೂರು ನಗರ ವ್ಯಾಪ್ತಿಯಲ್ಲಿ ನೀರು ಪೋಲಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯಾಗಿದೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ವಕೀಲ ಟಿ.ಪಾಂಡುರಂಗಯ್ಯ, ನಗರಸಭೆ ಎಇಇ ಸುನೀಲ್, ಹೆಚ್.ವಿ.ಅಜಯ್ ನಗರಸಭೆ ನೌಕರರು, ಪೌರಕಾರ್ಮಿಕರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *