
ಹಿರಿಯೂರು:
ತಾಲ್ಲೂಕಿನ ದಿಂಡಾವರ ಗ್ರಾಮಪಂಚಾಯ್ತಿ ವ್ಯಾಪ್ತಿಯ ದಿಂಡಾವರ ಗ್ರಾಂದಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕಳೆದ ಐದಾರು ವರ್ಷಗಳಿಂದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅಂತ್ಜಲ ಬತ್ತಿ ಹೋಗಿದ್ದು, ಸಾವಿರ ಅಡಿ ಬೋರ್ ಹೊಡೆಸಿದರು ಸಹ ನೀರು ಸಿಗುತ್ತಿಲ್ಲ. ಗ್ರಾಮದಲ್ಲಿನ ಸಾವಿರಾರು ಜನರು ಖಾಸಗಿ ಬೋರ್ ವೆಲ್ ಗಳ ನೀರನ್ನು ಅವಲಂಬಿಸಿ ಬೇಸಿಗೆ ಮುಗಿಸುವುದು ಪ್ರತಿ ವರ್ಷದ ಗೋಳಾಗಿದೆ. ಕೆಲವೊಮ್ಮೆ ಕಿ.ಮೀ.ಗಟ್ಟಲೆ ನಡೆದು ಹೋಗಿ ಜಮೀನುಗಳಲ್ಲಿ ನೀರು ಹಿಡಿದು ತರುವುದು ಮಹಿಳೆಯರಿಗೆ ಕಷ್ಟವಾಗುತ್ತಿದೆ.
ಈಗಾಗಲೇ ಈ ಭಾಗದಲ್ಲಿನ ನೀರಿನ ಹಾಹಾಕಾರಕ್ಕೆ ಶಾಶ್ವತ ಪರಿಹಾರ ಒದಗಿಸಿ ಎಂದು ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಇನ್ನಾದರೂ ಕಲ್ವಳ್ಳಿ ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಕೊಡಬೇಕು ಎಂಬುದಾಗಿ ಗ್ರಾಮಸ್ಥರು ಆಗ್ರಹಿಸಿದರು.
ಈ ವೇಳೆ ರೈತ ಮುಖಂಡರಾದ ವಿರುಪಾಕ್ಷಪ್ಪ ಅವರು ಮಾತನಾಡಿ ಕುಡಿಯುವ ನೀರು ಕೊಡಿ ಎಂದು ಹೀಗೆ ಪ್ರತಿಭಟನೆ ನಡೆಸಿದಾಗ ಟ್ಯಾಂಕರ್ ನಲ್ಲಿ ನೀರು ಒದಗಿಸಿ ಸುಮ್ಮನಾಗುತ್ತಾರೆ. ಆಮೇಲೆ ಯಥಾ ಪ್ರಕಾರ ಬೇಸಿಗೆ ಮುಗಿಯುವವರೆಗೆ ಗ್ರಾಮದವರು ಕುಡಿಯುವ ನೀರಿಗೆ ಪರದಾಡುವುದು ತಪ್ಪುತ್ತಿಲ್ಲ.ಕಳೆದ ಒಂದು ದಶಕಕ್ಕೂ ಹೆಚ್ಚುಕಾಲದಿಂದ ಇದೇ ಸಮಸ್ಯೆ ಇದೆ. ನಮಗೆ ತಾತ್ಕಾಲಿಕ ಪರಿಹಾರಗಳು ಬೇಡ. ಶಾಶ್ವತವಾಗಿ ಕುಡಿಯುವ ನೀರು ಒದಗಿಸಿ ಎಂಬುದಾಗಿ ಅವರು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಸಿದ್ದೇಶ್ ಹಾಗೂ ತಾಲ್ಲೂಕು ಪಂಚಾಯಿತಿ ಇ.ಓ.ಡಾ.ಪ್ರಮೋದ್ ರವರು ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಆದಷ್ಟು ಶೀಘ್ರವಾಗಿ ಈ ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು. ಎಂದರಲ್ಲದೆ,
ಈಗಾಗಲೇ ಖಾಸಗಿ ಬೋರ್ ವೆಲ್ ನಿಂದ ಪೈಪ್ ಲೈನ್ ಮಾಡಿಸುತ್ತಿದ್ದು ಆದ್ದರಿಂದಲೇ ನೀರಿನ ಸರಬರಾಜು ಮಾಡಲಾಗುವುದು.ಜೊತೆಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುವುದು ಎಂಬುದಾಗಿ ಗ್ರಾಮಸ್ಥರನ್ನು ಸಮಾಧಾನಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ವಿರುಪಾಕ್ಷಪ್ಪ, ಗೋವಿಂದರಾಜು, ಮಂಜಣ್ಣ, ದೇವರಾಜ್, ಸುರೇಶ್ ಗೌಡ್ರು, ಪುಟ್ಟಮ್ಮ, ರಾಜಮ್ಮ, ಭಾಗ್ಯಮ್ಮ, ಪದ್ಮ, ಇಂದ್ರಮ್ಮ, ಕರಿಯಮ್ಮ ಸೇರಿದಂತೆ ದಿಂಡಾವರ ಗ್ರಾಮಸ್ಥರು ಉಪಸ್ಥಿತರಿದ್ದರು.
