
ಹಿರಿಯೂರು:
ಕನ್ನಡ ಸಾಹಿತ್ಯದ ಅತ್ಯಂತ ಜನಪ್ರಿಯ ತ್ರಿಪದಿ ಕವಿ ಮತ್ತು ತತ್ವಜ್ಞಾನಿಯಾದ ಸರ್ವಜ್ಞರವರು ಮೂರು ಸಾಲಿನ ಪದ್ಯವಾದ ತ್ರಿಪದಿಗಳನ್ನು ಸರಳ ಭಾಷೆಯಲ್ಲಿ ರಚಿಸುವ ಮೂಲಕ ಸಮಾಜದ ಲೋಪದೋಷಗಳನ್ನು ತಿದ್ದಲು ಹೋರಾಡಿದ ಮಹಾನ್ ಚೇತನ ಎಂಬುದಾಗಿ ತಾಲ್ಲೂಕು ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಸಿದ್ದೇಶ್ ಹೇಳಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ನಗರಸಭೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.

ಸರ್ವಜ್ಞ ಎಂದರೆ ಎಲ್ಲ ತಿಳಿದವನು ಎಂದರ್ಥವಲ್ಲ, ಸರ್ವರೊಳು ಒಂದೊಂದು ನುಡಿ ಕಲಿತವನು ಎಂದರ್ಥ, ಸುಮಾರು 16 ನೇ ಶತಮಾನದಲ್ಲಿ ಜನಸಾಮಾನ್ಯರಿಗೆ ತಮ್ಮ ತ್ರಿಪದಿಗಳ ಮೂಲಕ ಸರಳ ಕನ್ನಡ ಭಾಷೆಯಲ್ಲಿ ಲೌಕಿಕ ಜ್ಞಾನವನ್ನು ಬೋಧಿಸಿದರು, ಇವರ ಪದ್ಯಗಳನ್ನು ಸರ್ವಜ್ಞನ ತ್ರಿಪದಿಗಳು ಎಂದು ಕರೆಯಲಾಗುತ್ತದೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಸಿದ್ದೇಶ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸರ್ಕಾರಿ ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ ಅವರು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಸಣ್ಣಭೀಮಣ್ಣ, ಮಂಜುನಾಥ್, ಮಹೇಶ್ವರಪ್ಪ, ರಂಗಸ್ವಾಮಿ, ಕೃಷ್ಣ, ಚಂದ್ರಶೇಖರ್ ಇವರುಗಳು ಆಗಮಿಸಿದ್ದರು.ನಗರಸಭೆಯ ನಯಾಜ್, ನಗರ ಪೊಲೀಸ್ ಎ.ಎಸ್.ಐ ಚಂದ್ರಪ್ಪ, ಕರ್ನಾಟಕ ಜಲ ಮಂಡಳಿ ನಿಗಮದ ಚಂದ್ರಶೇಖರ್, ಪಶುಪಾಲನಾ ಇಲಾಖೆಯ ಎಸ್.ಸುರೇಶ್, ಕಂದಾಯ ಇಲಾಖೆಯ ಟಿ.ಶ್ರೀನಿವಾಸ ರೆಡ್ಡಿ, ಆರ್.ಕಾರ್ತಿಕ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

