
ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಎರೆನಾಡು ರೈತ ಸಂಘದ ಪದಾಧಿಕಾರಿಗಳು, ಅಧ್ಯಕ್ಷರಾದ ರುದ್ರಮುನಿ ಇವರ ನೇತೃತ್ವದಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ಸ್ಥಳವನ್ನು ಪರಿಶೀಲಿಸಿದರು.
ಈ ಪರಿಶೀಲನೆಯ ಸಂದರ್ಭದಲ್ಲಿ ಕಾಮಗಾರಿಯ ಪ್ರಗತಿ ಮತ್ತು ಅನುದಾನದ ಕೊರತೆಯ ಬಗ್ಗೆ ಚರ್ಚಿಸಲಾಯಿತಲ್ಲದೆ ಕಾಮಗಾರಿ ಸಂದರ್ಭದಲ್ಲಿ ದೊಡ್ಡ ಮಟ್ಟದ ಕಲ್ಲು ಸಿಕ್ಕಿದ್ದು ಕಾಮಗಾರಿ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿಗೆ ವೇಗ ನೀಡುವಂತೆ ಮತ್ತು ಅನುದಾನ ಬಿಡುಗಡೆಗೆ ಜನಪ್ರತಿನಿಧಿಗಳು ಸರ್ಕಾರಕ್ಕೆ ಒತ್ತಾಯಿಸುವಂತೆ ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ 21,473 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ,ಅನುದಾನದ ಕೊರತೆಯಿಂದಾಗಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ರೈತರು ತಮ್ಮ ಜಮೀನುಗಳಿಗೆ ನೀರು ಪೂರೈಸಲು ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳಬೇಕೆಂದು ಬಯಸುತ್ತಿದ್ದಾರೆ.
ಭದ್ರಾ ಬಲದಂಡೆ ಕಾಮಗಾರಿ ವೇಗ ಹೆಚ್ಚಿಸಿ ರೈತರ ಹಿತ ಕಾಪಾಡುವಂತೆ ಎರೆನಾಡು ರೈತ ಸಂಘದ ಅಧ್ಯಕ್ಷರಾದ ಕೆ.ಟಿ.ರುದ್ರಮುನಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಚಿತ್ರದುರ್ಗ ಶಾಖಾ ಕಾಳುವೆ ಕಾಮಗಾರಿ ಪೂರ್ಣಗೊಳಿಸಿ ಮಾರ್ಚ್ ಅಂತ್ಯದ ವೇಳೆ ನೀರು ಹರಿಸಬೇಕು ಮತ್ತು ಹನಿ ನೀರಾವರಿ ಮಾಡಲು ಪೈಪ್ ಲೈನ್ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಮಾಡಬೇಕು ಎಂಬುದಾಗಿ ಅವರು ಆಗ್ರಹಿಸಿದರು.ಅಲ್ಲದೆ, ವೈ. ಜೆಕ್ಷನ್, ಅಬ್ಬಿನಹೊಳಲು, ಹೆಗ್ಗಡೆಹಳ್ಳಿ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಗೌನಳ್ಳಿ ಡಿ.ಚಂದ್ರಶೇಖರ್, ಬಿ.ತ್ಯಾರನಾಯಕ, ಕೆ.ಶಿವಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

