
ಹಿರಿಯೂರು :
ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತೂ ಅಲ್ಲ, ಸತತವಾದ ಪರಿಶ್ರಮ ಹಾಗೂ ನಿರಂತರ ಅಭ್ಯಾಸದ ಮೂಲಕ ಯಾರೂ ಬೇಕಾದರೂ ಯಶಸ್ಸು ಸಾಧಿಸಬಹುದು, ಯಾವುದೇ ವ್ಯಕ್ತಿಯೂ ಸೋಲನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಗೆಲುವಿನ ಮೆಟ್ಟಿಲನ್ನು ಏರಲು ಸಾಧ್ಯ, ಸೋಲನ್ನು ಅನುಭವವಾಗಿ ಸ್ವೀಕರಿಸಿ ಗೆಲುವಿನ ನಗೆ ಬೀರಲು ಪ್ರತಿಯೊಬ್ಬ ವ್ಯಕ್ತಿಯೂ ಸಿದ್ಧರಾಗಬೇಕು ಎಂಬುದಾಗಿ ನಿವೃತ್ತ ಐಪಿಎಸ್ ಅಧಿಕಾರಿಗಳಾದ ಭಾಸ್ಕರ್ ರಾವ್ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ರೋಟರಿ ಸಂಸ್ಥೆ, ವಾಣಿವಿಲಾಸ ವಿದ್ಯಾಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತತ 12 ನೇ ಬಾರಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಅಂಗೈಯಲ್ಲಿಯೇ ಎಲ್ಲಾ ಸೌಲಭ್ಯಗಳು ಸಿಗುವಂತಾಗಿದ್ದು, ಸತತ ಪರಿಶ್ರಮ ಧೈರ್ಯದಿಂದ ಮುನ್ನುಗ್ಗುವ ಛಲ ನಿಮ್ಮಲ್ಲಿದ್ದರೆ ನೀವು ಯಾವಕ್ಷೇತ್ರದಲ್ಲಿ ಬೇಕಾದರೆ ಯಶಸ್ಸು ಸಾಧಿಸಬಹುದು, ಮತ್ತು ಯಾವ ದೇಶದಲ್ಲಿ ಬೇಕಾದರೆ ಉದ್ಯೋಗ ಪಡೆಯಬಹುದು, ನಿಮ್ಮ ಸಾಧನೆಗೆ ಸ್ಪೂರ್ತಿ ತುಂಬಲು ರೆಡ್ ಕ್ರಾಸ್ ಹಾಗೂ ರೋಟರಿ ಸಂಸ್ಥೆಗಳು ನಿಮ್ಮ ಜೊತೆಗೆ ಬೆಂಬಲವಾಗಿ ನಿಂತಿವೆ ಎಂಬುದಾಗಿ ಹೇಳಿದರು.
ರೋಟರಿ ಪಿಡಿಜೆ ಮಧುಪ್ರಸಾದ್ ಮಾತನಾಡಿ, ನಮ್ಮ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಸಮಾಜದಲ್ಲಿನ ಆರ್ಥಿಕವಾಗಿ ದುರ್ಬಲ ಹಾಗೂ ಅಶಕ್ತ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಹಾಯವನ್ನು ನೀಡುವ ಯೋಜನೆಯನ್ನು ಸಹ ರೂಪಿಸಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಜೀವನದಲ್ಲಿ ಉತ್ತಮ ಪ್ರಜೆಗಳಾಗಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬುದಾಗಿ ಹೇಳಿದರು.
ಜಿ.ಪಂ.ಮಾಜಿ ಅಧ್ಯಕ್ಷ ಹಾಗೂ ವಾಣಿವಿಲಾಸ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಬಿ.ಎಸ್.ರಘುನಾಥ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಪ್ರತಿಭಾವಂತರಾಗಿದ್ದು, ಈ ಪ್ರತಿಭಾವಂತರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ನಗರದ ರೆಡ್ ಕ್ರಾಸ್ ಹಾಗೂ ರೋಟರಿ ಸಂಸ್ಥೆಗಳು ಮಾಡುತ್ತಿದ್ದು, ಅವರಿಗೆ ಬೆಂಬಲವಾಗಿ ನಮ್ಮ ವಾಣಿವಿಲಾಸ ವಿದ್ಯಾಸಂಸ್ಥೆಯಿಂದ ಬಹುಮಾನಗಳ ಪ್ರಾಯೋಜಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇವೆ ಎಂಬುದಾಗಿ ಹೇಳಿದರು.

ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಸಾಮಾಜಿಕ ಕಳಕಳಿ ಹೊಂದಿದ ಸೇವಾಸಂಸ್ಥೆಗಳಾಗಿದ್ದು, ಕಳೆದ 12 ವರ್ಷಗಳಿಂದಲೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವಂತಹ ಕೆಲಸವನ್ನು ಮಾಡಲಾಗುತ್ತಿದೆ, ಈ ಕಾರ್ಯಕ್ಕೆ ಅನೇಕ ದಾನಿಗಳು ಸಹಾಯಹಸ್ತ ನೀಡಿದ್ದು, ಅವರಿಗೆ ನಮ್ಮ ಸಂಸ್ಥೆಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ ಸುಮಾರು 125 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ, ಹಾರಹಾಕಿ ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷರಾದ ಕೆ.ಎ.ವರುಣ್ ವಹಿಸಿದ್ದರು. ವೇದಿಕೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಕಾರ್ಯದರ್ಶಿ ಶ್ರೀಉಮಾಕಾಂತ್, ರೆಡ್ ಕ್ರಾಸ್ ರಾಜ್ಯ ನಿರ್ದೇಶಕ ಅನಂತರೆಡ್ಡಿ, ಚಿತ್ರದುರ್ಗ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಗಾಯಿತ್ರಿಶಿವರಾಂ, ಹಾಗೂ ಹಿರಿಯೂರು ರೆಡ್ ಕ್ರಾಸ್ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ರೋಟರಿ ಕಾರ್ಯದರ್ಶಿ ವಿಕಾಸ್ ಡಿ.ಜೈನ್, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರೊಟೇರಿಯನ್ ಹಾಗೂ ರೆಡ್ ಕ್ರಾಸ್ ಸದಸ್ಯರುಗಳಾದ ಎಲ್.ಆನಂದಶೆಟ್ಟಿ, ಪ್ರೋ.ನಾಗಣ್ಣ, ಎಸ್.ಜೋಗಪ್ಪ, ಟಿ.ಮಲ್ಲೇಶಪ್ಪ, ಹೆಚ್.ಎಸ್.ನಾಗರಾಜಗುಪ್ತಾ, ಎಂ.ವಿ.ಶಿವರಾಂ, ದೇವರಾಜ್ ಮೂರ್ತಿ, ಎಸ್..ಎನ್.ಎಲ್.ವೆಂಕಟೇಶ್, ರಂಗನಾಥಪ್ಪ, ಸಣ್ಣಭೀಮಣ್ಣ, ಮಹಾಬಲೇಶ್ವರ ಶೆಟ್ಟಿ, ಪಿ.ಆರ್.ಸತೀಶ್ ಬಾಬು, ಇಸ್ಮಾಯಿಲ್, ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ರಾಧಾಕೃಷ್ಣ, ಚಂದ್ರವದನಸತ್ಯಮೂರ್ತಿ, ಲತಾರಾಮಚಂದ್ರಪ್ಪ, ಸರಸ್ವತಿನಾಗರಾಜ್, ಪದ್ಮಜಾಮಹಾಬಲೇಶ್ವರಶೆಟ್ಟಿ, ಸಂಗೀತಾರಾಜೇಶ್, ಪ್ರೇಮಾಹನುಮಂತರಾಯಪ್ಪ, ಸೌಮ್ಯಜಗನ್ನಾಥ್, ಶ್ರೀಮತಿ ವಸಂತಾ, ಶ್ರೀಮತಿ ನಂದಿನಿ, ಶ್ರೀಮತಿ ಭಾಗ್ಯ, ಶ್ರೀಮತಿ ರಚನಾ, ಶ್ರೀಮತಿ ಸಾಕಮ್ಮ, ಶ್ರೀಮತಿ ಗಂಗಮ್ಮ, ಶ್ರೀಮತಿ ರಂಜಿತಾ, ಶ್ರೀಮತಿ ಸುಧಾ, ಪೂಜಾ, ಸೇರಿದಂತೆ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.
ಆರಂಭದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ರೆಡ್ ಕ್ರಾಸ್ ರಿಪೋರ್ಟರ್ ಆಲೂರು ಹನುಮಂತರಾಯಪ್ಪ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ರೆಡ್ ಕ್ರಾಸ್ ಉಪಾಧ್ಯಕ್ಷರಾದ ಎ.ರಾಘವೇಂದ್ರ ಕಾರ್ಯಕ್ರವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

