
ಹಿರಿಯೂರು :
ನಮ್ಮ ಹಿರಿಯೂರು ಕನ್ನಡ ಸಾಹಿತ್ಯ ಪರಿಷತ್ತಿಗೆ ಏನಾಗಿದೆ ಅನ್ನೋದು ಗೊತ್ತಾಗುತ್ತಿಲ್ಲ ಜಾತಿ ಮತ ಕುಲ ಧರ್ಮಗಳನ್ನು ಮೀರಿ ಎಲ್ಲಾ ಸರ್ವಧರ್ಮೀಯರನ್ನು, ಸಾಹಿತ್ಯಾಸಕ್ತರನ್ನು, ತನ್ನೆಡೆಗೆ ಸೆಳೆಯಬೇಕಿದ್ದ ಎಲ್ಲಾ ಕನ್ನಡದ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಮಾಡಬೇಕಿದ್ದ ಹಾಗೂ ಎಲ್ಲಾ ಕನ್ನಡ ಸಹೃದಯವರನ್ನು ಒಂದೆಡೆ ಸೇರಿಸಿ ಈ ಕನ್ನಡ ರಥವನ್ನು, ಕನ್ನಡದ ತೇರನ್ನು ಎಳೆಯುವ ಕೆಲಸ ಮಾಡಬೇಕಿದ್ದ ಈ ಸಾಹಿತ್ಯ ಪರಿಷತ್ತಿಗೆ ಏನಾಗಿದೆ ಎಂಬುದಾಗಿ ಹಿರಿಯಪತ್ರಕರ್ತರಾದ ಆಲೂರು ಹನುಮಂತರಾಯಪ್ಪ ಪ್ರಶ್ನಿಸಿದ್ದಾರೆ.
ಆದರೆ ಆ ಕೆಲಸ ಮಾಡದೆ ಅಲ್ಲಿ ಸೇರಿಕೊಂಡಿರುವ ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ವಿಕೃತ ಮನಸ್ಥಿತಿ ಹೊಂದಿರುವ ವ್ಯಕ್ತಿಗಳಿಂದ ಕನ್ನಡಸಾಹಿತ್ಯ ಪರಿಷತ್ತಿಗೆ, ಕನ್ನಡಸಾಹಿತ್ಯ ಸಮ್ಮೇಳನಕ್ಕೆ ಕೆಟ್ಟ ಹೆಸರು ಬರುತ್ತಿದೆ, ಈ ಮೊದಲೆಲ್ಲ ಕವಿಗಳು ಸಾಹಿತಿಗಳು ಬರಹಗಾರರಿಗೆ ವೇದಿಕೆಯಾಗಿ ಆಶ್ರಯತಾಣವಾಗಿದ್ದ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಈಗ ರಾಜಕಾರಣಿಗಳ, ಮರಿಪುಡಾರಿಗಳ ಆಶ್ರಯತಾಣವಾಗಿದೆ, ಎಂಬುದೇ ಇಂದಿನ ದುರಂತವಾಗಿದೆ.
ಈ ಸಾಹಿತ್ಯ ಪರಿಷತ್ತಿಗೆ ನಾವು ನಮ್ಮ ಗೆಳೆಯರು, ಡಾ.ಹಂಪನಾಗರಾಜಯ್ಯನವರು ರಾಜ್ಯಾಧ್ಯಕ್ಷರಾದ ಕಾಲದಿಂದ ಸಾಹಿತ್ಯ ಪರಿಷತ್ತಿನೊಂದಿಗೆ ಒಡನಾಟವಿಟ್ಟುಕೊಂಡಿರುವ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರು ಅಷ್ಟೇ ಅಲ್ಲ ತಾಲ್ಲೂಕು ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಾಹಿತ್ಯ ಸಮ್ಮೇಳನ ಸೇರಿದಂತೆ ಬೇರೆ ಬೇರೆ ತಾಲ್ಲೂಕುಗಳ ಸಾಹಿತ್ಯ ಸಮ್ಮೇಳನಗಳಲ್ಲಿ ಕವಿಗೋಷ್ಠಿಗಳಲ್ಲಿ, ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿ, ಕವನ-ಕಥೆ ವಿಚಾರಗಳನ್ನು ಮಂಡಿಸಿದ ಅನುಭವವಿದೆ.ಆದರೆ ಅದಾವುದೂ ಈಗ ಲೆಕ್ಕಕ್ಕೆ ಬರುವುದಿಲ್ಲ.
ಈ ಹಿಂದಿನ ಸಮಾವೇಶಗಳಲ್ಲಿ ಹಿರಿಯ ಪರ್ತಕರ್ತರುಗಳಾದ ರಾಜಣ್ಣಶೆಟ್ಟಿ, ಎಂ.ವಿಶ್ವನಾಥ್ ರಾವ್, ಎಳನಾಡುಅಂಜಿನಪ್ಪ, ಸಾಹಿತಿ ಕಣಜನಹಳ್ಳಿನಾಗರಾಜ್, ಹರಿಯಬ್ಬೆ ಪ್ರೇಮಕುಮಾರ್, ಕವಯಿತ್ರಿ ಹರಿಯಬ್ಬೆ ಕೆಂಚಮ್ಮ, ಬಬ್ಬೂರು ತಿಪ್ಪೀರನಾಯಕ, ಸೇರಿದಂತೆ ನಾವೆಲ್ಲಾ ಗೆಳೆಯರು ಅನೇಕ ಜನ ಸಮ್ಮೇಳನದ ಯಶಸ್ಸಿಗಾಗಿ ಶ್ರಮಿಸಿದ್ದಾರೆ. ಅಷ್ಟೇ ಏಕೆ ಈಗಿನ ಆದಿಜಾಂಬವ ಮಠದ ಪೀಠಾಧ್ಯಕ್ಷರಾಗಿರುವ ಶ್ರೀಶ್ರೀಷಡಕ್ಷರಮುನಿ ಸ್ವಾಮೀಜಿಗಳು ಸಮ್ಮೇಳನದಲ್ಲಿ ಪಾಲ್ಗೊಂಡು ಕವಿಗೋಷ್ಠಿಗಳಲ್ಲಿ ಕವನವಾಚನ ಮಾಡಿದ ಉದಾಹರಣೆಗಳಿವೆ.
ಆದರೆ ಈಗೆಲ್ಲಾ ಕಾಲ ಬದಲಾಗಿದೆ, ಎಂದೂ ಒಂದು ಸಾಲಿನ ಕವಿತೆಗಳನ್ನು ಬರೆಯದ, ಕಥೆ-ಕವನ, ಸಾಹಿತ್ಯವನ್ನೇ ಅರಿಯದ ನಕಲಿ ಸಾಹಿತಿಗಳು ಸಾಹಿತ್ಯ ಪರಿಷತ್ತನ್ನು ಆಶ್ರಯತಾಣಮಾಡಿಕೊಂಡಿದ್ದಾರೆ, ಇದನ್ನು ಮನಗಂಡ ಅನೇಕ ಸಾಹಿತ್ಯ ಪ್ರೇಮಿಗಳು, ಕವಿಗಳು, ಸಾಹಿತಿಗಳು ಬರಹಗಾರರು, ಈ ಸಾಹಿತ್ಯ ಪರಿಷತ್ತಿನಿಂದ ಹಾಗೂ ಈ ಸಾಹಿತ್ಯ ಸಮ್ಮೇಳನದಿಂದ ದೂರವೇ ಉಳಿದಿದ್ದಾರೆ. ಕನಿಷ್ಠ ಪಕ್ಷ ಅವರ ಹೆಸರನ್ನು ಹಾಕದೇ, ಅವರಿಗೆ ಯಾವುದೇ ವೇದಿಕೆ ಕೊಡದೇ ಅವರನ್ನು ಈ ಸಮ್ಮೇಳನದಿಂದ ದೂರವೇ ಉಳಿಸಿ, ಈ ಸಾಹಿತ್ಯ ಸಮ್ಮೇಳನ ನಡೆಸುತ್ತಿದ್ದಾರೆ.
ಇಂತಹ ಹಲವು ಕಾರಣಗಳಿಂದಾಗಿ ಈ ಸಾಹಿತ್ಯ ಸಮ್ಮೇಳನ ಕೇವಲ ಒಂದೆರಡು ದಿನ ಉಳಿದಿರುವಾಗ ಸಾಹಿತ್ಯ ಪರಿಷತ್ತಿನ ಗೌ.ಕಾರ್ಯದರ್ಶಿ ಕೃಷ್ಣಮೂರ್ತಿ ನಮ್ಮ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿ, ಅಲ್ಲಿಂದ ಹೊರಬಂದಿದ್ದಾರೆ, ದಲಿತ ಸಂಘಟನೆಗಳನ್ನು ದಲಿತ ಮುಖಂಡರನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲದ ಕಾರಣ ದಲಿತ ಸಂಘಟನೆಗಳ ಒಕ್ಕೂಟದ ಗೌ.ಅಧ್ಯಕ್ಷ ಕೆ.ಪಿ.ಶ್ರೀನಿವಾಸ್, ಹಾಗೂ ಅಧ್ಯಕ್ಷ ತಿಮ್ಮರಾಜು, ಈ ಸಾಹಿತ್ಯ ಸಮ್ಮೇಳನವನ್ನು ಪತ್ರಿಕಾ ಹೇಳಿಕೆ ಮೂಲಕ ಬಹಿಷ್ಕರಿಸಿದ್ದಾರೆ.
ಆದರೂ ಎಲ್ಲಾದರೂ ಇರು, ಎಂತಾದರೂ ಇರು ನೀ ಎಂದೆಂದಿಗೂ ಕನ್ನಡವಾಗಿರು ಎಂಬ ರಾಷ್ಟ್ರಕವಿ ಕುವೆಂಪುರವರ ಕವಿವಾಣಿಯಂತೆ ಈ ಸಾಹಿತ್ಯ ಸಮ್ಮೇಳವನ್ನು ಯಾರೇ ನಡೆಸಲಿ, ನಮ್ಮ ಊರಿನ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂಬುದಾಗಿ ಹಾರೈಸೋಣ, ಈ ಎಲ್ಲಾ ತಪ್ಪು-ಒಪ್ಪುಗಳನ್ನು ಆಮೇಲೆ ಸರಿಮಾಡಿಕೊಳ್ಳಬಹುದು, ಮುಂದಿನ ದಿನಗಳಲ್ಲಿಯಾದರೂ ಈ ಕಾರ್ಯಕ್ರಮದ ಸಂಘಟಕರು ಈ ಎಲ್ಲಾ ತಪ್ಪುಗಳನ್ನು ಸರಿಮಾಡಿಕೊಂಡು ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತನ್ನು ಮುನ್ನಡೆಸಲಿ ಎಂಬುದು ನಮ್ಮ ಆಶಯವಾಗಿದೆ.

