

ಹಿರಿಯೂರು :
ನಗರದ ತಾಲೂಕು ಕಚೇರಿಯಲ್ಲಿ ಕಳೆದ ಮೂರು ದಿನಗಳಿಂದ ಪಹಣಿ ತಿದ್ದುಪಡಿ ಅಭಿಯಾನ ನಡೆಯುತ್ತಿದ್ದು, ಪಹಣಿ ವಿತರಣಾ ಕೇಂದ್ರದಲ್ಲಿ ಪೇಪರ್ ಇಲ್ಲ ಎಂದು ರೈತರನ್ನು ಬೇರೆ ಕಡೆ ಕಳಿಸುತ್ತಿದ್ದಾರೆ. ಕನಿಷ್ಠ ಪಹಣಿಯನ್ನು ಕೊಡಲಾರದ ಸ್ಥಿತಿಗೆ ರಾಜ್ಯದ ಕಂದಾಯ ಇಲಾಖೆಯು ಬಂದು ನಿಂತಿರುವುದು ಇದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಹಾಗೂ ರೈತ ಹೋರಾಟಗಾರ ಕಸವನಹಳ್ಳಿ ರಮೇಶ್ ಆಪಾದಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತಾಲ್ಲೂಕು ಕಚೇರಿಯಲ್ಲಿ ಪಹಣಿಯನ್ನೇನು ಉಚಿತವಾಗಿ ಕೊಡುವುದಿಲ್ಲ. ಒಂದು ರೂಪಾಯಿ ಪೇಪರಿಗೆ ರೈತರು 25 ರೂಪಾಯಿ ಕೊಟ್ಟು ಒಂದು ಪಹಣಿಯನ್ನು ಖರೀದಿಸಬೇಕು. ಕಂದಾಯ ಸಚಿವರು ಇಲಾಖೆಯನ್ನು ಸುಧಾರಿಸುತ್ತೇನೆ ಎಂದು ಪ್ರತಿದಿನ ಟಿ.ವಿ.ಮಾಧ್ಯಮಗಳಲ್ಲಿ ಹೇಳುತ್ತಾರೆ, ಆದರೆ ಇಲ್ಲಿ ಯಾವ ಸುಧಾರಣೆಯೂ ಆಗಿಲ್ಲ,
ರಾಜ್ಯದಲ್ಲಿ ಕನಿಷ್ಠ ರೈತರಿಗೆ ಪಹಣಿ ಕೊಡಲಾರದ ಸ್ಥಿತಿಗೆ ನಮ್ಮ ಕಂದಾಯ ಇಲಾಖೆ ತಲುಪಿರುವುದು ದುರಂತದ ಸಂಗತಿಯಾಗಿದ್ದು, ರಾಜ್ಯದ ಕಂದಾಯ ಸಚಿವರಾದ ಕೃಷ್ಣಬೈರೇಗೌಡರು ಒಂದು ಬಾರಿ ಹಿರಿಯೂರು ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ಮಾಡುವ ಮೂಲಕ ತಾಲ್ಲೂಕು ಕಚೇರಿಯ ಅವ್ಯವಸ್ಥೆಯನ್ನು ಪರಿಶೀಲಿಸಬೇಕು ಎಂಬುದಾಗಿ ಕಸವನಹಳ್ಳಿ ರಮೇಶ್ ಕಂದಾಯ ಸಚಿವರಲ್ಲಿ ಮನವಿ ಮಾಡಿದ್ದಾರೆ.