
ಹಿರಿಯೂರು :
ಹಿರಿಯೂರು-ಚಳ್ಳಕೆರೆ ಮಾರ್ಗಮಧ್ಯೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಗ್ರಾಮೀಣ ನಿಲುಗಡೆ ಬಸ್ ಚಾಲಕ ನಿರ್ವಾಹಕರ ಕರ್ತವ್ಯ ಲೋಪವನ್ನು ಸರಿಪಡಿಸಬೇಕು ಎಂಬುದಾಗಿ ಸಾಮಾಜಿಕ ಕಾರ್ಯಕರ್ತರಾದ ಎಸ್.ವಿ.ರಂಗನಾಥ್ ಅವರು ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಭಾಗದಲ್ಲಿ ಸಂಚರಿಸುವ ಬಸ್ ಗಳು ಸಮಯ ಪಾಲನೆ ಮಾಡುತ್ತಿಲ್ಲ. ಚಾಲಕ ನಿರ್ವಾಹಕರು ಪ್ರಯಾಣಿಕರ ಜೊತೆ ಸೌಜನ್ಯದಿಂದ ನಡೆದುಕೊಳ್ಳುತ್ತಿಲ್ಲ. ಕೆಲವೊಮ್ಮೆ ಹರ್ತಿಕೋಟೆ, ಯರಬಳ್ಳಿ, ಗೊಲ್ಲಹಳ್ಳಿ, ಸಾಣಿಕೆರೆ, ಫ್ಲೈ ಓವರ್ ಮೇಲೆ ಸಂಚರಿಸಿ ಸರ್ವ್ಯೀಸ್ ರಸ್ತೆಯಲ್ಲಿ ಬಸ್ ಗಾಗಿ ಕಾದು ಕುಳಿತ ಪ್ರಯಾಣಿಕರಿಗೆ ತೊಂದರೆ ಮಾಡುತ್ತಾರೆ.
ಕಂದಾಯ ಗ್ರಾಮಗಳಿಗೆ ಹೊಂದಿಕೊಂಡ ಮಜರೆ ಗ್ರಾಮಗಳಲ್ಲಿ ಬಸ್ ನಿಲ್ಲಿಸದೆ ಹಾಗೆಯೇ ಹೊರಟು ಹೋಗುತ್ತಾರೆ. ಹಾಗು ಆಧಾರ್ ಕಾರ್ಡ್ ಇರುವ ಮಹಿಳಾ ಪ್ರಯಾಣಿಕರಿಗೆ ನಿಮ್ಮ ಊರಿಗೆ ಟಿಕೆಟ್ ಬರುತ್ತಿಲ್ಲ, ನೀವು ಹಿಂದಿನ ಅಥವಾ ಮುಂದಿನ ಊರಿಗೆ ಇಳಿಯಬೇಕಾಗುತ್ತದೆ ಎಂಬುದಾಗಿ ಹೇಳುತ್ತಾರೆ.
ಅಲ್ಲದೆ, ಕೆಎ-16-ಎಫ್.0107ಬಸ್ಸು ಚಳ್ಳಕೆರೆಯಿಂದ ಹಿರಿಯೂರಿಗೆ ಸಂಜೆ ಬರುವ ಬಸ್ ಯರಬಳ್ಳಿಯಲ್ಲಿ ಇಳಿಯಬೇಕಿದ್ದ ಮಹಿಳೆಯರನ್ನು ರಾತ್ರಿ ಕತ್ತಲಲ್ಲಿ ಕಳವಿಭಾಗಿ ಸಮೀಪ ಇಳಿಸಿದ್ದಾರೆ,ಇದೇ ಬಸ್ ಹೆಗ್ಗೆರೆ ಮಜರೆ ಹೊಟ್ಟಜ್ಜನಕಪಿಲೆ ಬಸ್ ನಿಲ್ದಾಣದಲ್ಲಿ ನಿಲ್ಲಿಸದೆ ಹೊರಟು ಹೋಗುತ್ತಾರೆ ಎಂಬುದಾಗಿ ಎಸ್.ವಿ.ರಂಗನಾಥ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಆದಪ್ರಯುಕ್ತ ಚಿತ್ರದುರ್ಗ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿಗಳು ಈ ಸಮಸ್ಯೆಯನ್ನು ಸರಿಪಡಿಸಬೇಕು ಹಾಗೂ ಸಮಯ ಪಾಲನೆ ಮಾಡಿ ಪ್ರಯಾಣಿಕರ ಜೊತೆ ಸೌಜನ್ಯವಾಗಿ ನಡೆದುಕೊಳ್ಳದಿರುವ ಚಾಲಕರು ಹಾಗೂ ನಿರ್ವಾಹಕರ ವಿರುದ್ಧ ಸೂಕ್ತಕ್ರಮ ಜರುಗಿಸಬೇಕು ಎಂಬುದಾಗಿ ಎಸ್. ವಿ. ರಂಗನಾಥ್ ಅವರು ಮನವಿ ಮಾಡಿದ್ದಾರೆ.

