
ಹಿರಿಯೂರು:
ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿ ಹುಳ ಮತ್ತು ಇಲಿ ಹಿಕ್ಕೆಗಳು ಪತ್ತೆಯಾದ ಬಗ್ಗೆ ರಾಜಧಾನಿಯಿಂದ ಪ್ರಸಾರವಾಗುವ ‘ಪವರ್ ಫೋಕಸ್ ನ್ಯೂಸ್’ ಹಾಗೂ ಸ್ಥಳೀಯ “ಹಿರಿಯೂರುನ್ಯೂಸ್” ಮಾಧ್ಯಮಗಳಲ್ಲಿ ಬಂದ ವರದಿಗೆ ಯಶಸ್ಸು ಸಿಕ್ಕಿದೆ. ವರದಿಯ ಇಂಫ್ಯಾಕ್ಟ್ ಎಂಬಂತೆ ವರದಿ ಪ್ರಸಾರವಾದ ಕೇವಲ ಒಂದು ದಿನದಲ್ಲಿ ಎಚ್ಚೆತ್ತ ಚಿತ್ರದುರ್ಗದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ, ವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಗುರುತರ ಜವಾಬ್ದಾರಿ ಹಾಗೂ ಮಾನವೀಯತೆ ಮೆರೆದಿದ್ದಾರೆ.
ಶಾಲೆಯ ಅಡುಗೆ ಮನೆಯಲ್ಲಿ ಇಲಿ ಹಿಕ್ಕೆ ಮಿಶ್ರಿತ ಅಕ್ಕಿ ಹಾಗೂ ಹುಳ ಹಿಡಿದ ಹಳೆಯ ಬೇಳೆಯನ್ನು ಬಳಸುತ್ತಿರುವುದನ್ನು ಅರ್ಜುನ್ ಬ್ಯಾಡರಹಳ್ಳಿ ಅವರು ಸಾಕ್ಷ್ಯ ಸಮೇತ ಜನರೆದುರು ಇಟ್ಟಿದ್ದರು.ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿಅವರು ಹಾಗೂ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಮಹೇಶ್ ರೆಡ್ಡಿ ಅವರು ಕೂಡಲೇ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ಅವರಿಗೆ ಸ್ಥಳದಲ್ಲೇ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಶಾಲೆಯಲ್ಲಿ ಉಳಿದಿದ್ದ ಎಲ್ಲಾ ಹಳೆಯ ಕಳಪೆ ಗುಣಮಟ್ಟದ ಅಕ್ಕಿ, ಬೇಳೆ ಮತ್ತು ಹಾಲಿನ ಪುಡಿಯನ್ನು ತಕ್ಷಣವೇ ವಾಪಸ್ ಪಡೆದು, ಅದರ ಬದಲಿಗೆ ಹೊಸದಾಗಿ ತಾಜಾ ಮತ್ತು ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಿಸಲು ಕ್ರಮಕೈಗೊಂಡಿದ್ದಾರೆ.
ಅಲ್ಲದೆ ತಾಲ್ಲೂಕಿನಾದ್ಯಂತ ಶಾಲೆಯಲ್ಲಿ ಉಳಿದಿದ್ದ ಹಳೆಯ ಎಲ್ಲಾ ಆಹಾರ ಪದಾರ್ಥಗಳನ್ನು ವಾಪಾಸ್ ಪಡೆಯಲಾಗಿದ್ದು, ತಾಲ್ಲೂಕಿನ ಎಲ್ಲಾ ಶಾಲೆಗಳ ಅಡುಗೆ ಕೋಣೆಗಳು ಹಾಗೂ ನೀರಿನ ವ್ಯವಸ್ಥೆ ಮತ್ತು ಆಹಾರದ ಗುಣಮಟ್ಟವನ್ನು ಕುರಿತು ಮೂರು ದಿನಗಳ ಒಳಗಾಗಿ ಕಡ್ಡಾಯವಾಗಿ ತಪಾಸಣೆಯನ್ನು ನಡೆಸಿ, ಕಚೇರಿಗೆ ಸೂಕ್ತವರದಿ ನೀಡುವಂತೆ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಅವರು ಎಲ್ಲಾ ಮುಖ್ಯಶಿಕ್ಷಕರುಗಳಿಗೆ ಹಾಗೂ ಬಿಸಿಯೂಟ ಜವಾಬ್ದಾರಿ ಹೊತ್ತಿರುವವರಿಗೆ ಖಡಕ್ ಆದೇಶವನ್ನು ಸಹ ನೀಡಿದ್ದಾರೆ.
ನಮ್ಮ ಮಾಧ್ಯಮಗಳ ವರದಿಗೆ ತಕ್ಷಣವೇ ಸ್ಪಂದಿಸಿ, ಕೇವಲ ನೋಟಿಸ್ ನೀಡುವುದಷ್ಟೇ ಅಲ್ಲದೆ, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಇಡೀ ತಾಲ್ಲೂಕಿನಾದ್ಯಂತ ತಪಾಸಣೆಗೆ ಮುಂದಾದ ಬಿ.ಇ.ಒ.ತಿಪ್ಪೇಸ್ವಾಮಿ ಹಾಗೂ ಸಹಾಯಕ ನಿರ್ದೇಶಕ ಮಹೇಶ್ ರೆಡ್ಡಿ ಅವರ ಕಾರ್ಯವೈಖರಿಗೆ ‘ಪವರ್ ಫೋಕಸ್ ನ್ಯೂಸ್’ ಮುಖ್ಯಸ್ಥರಾದ ಅರ್ಜುನ್ ಬ್ಯಾಡರಹಳ್ಳಿ ಹಾಗೂ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರಾದ ಆಲೂರುಹನುಮಂತರಾಯಪ್ಪರವರು ತುಂಬುಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

