
ಹಿರಿಯೂರು :
ನಗರದ ಹರಿಶ್ಚಂದ್ರ ಘಾಟ್ ನ 30ಮತ್ತು31ನೇ ವಾರ್ಡ್ ನಲ್ಲಿ ಹಕ್ಕು ಪತ್ರ ಕೊಟ್ಟಿರುವ ಜಾಗದಲ್ಲಿ ಸ್ಲಂಬೋರ್ಡ್ ನಿಂದ ಮರುಮನೆ ನಿರ್ಮಾಣ ಮಾಡಲು ಅವಕಾಶ ಕೊಟ್ಟಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ಮಾಡಬೇಕು ಎಂಬುದಾಗಿ ಹಿರಿಯ ನಾಗರೀಕ ವೇದಿಕೆಯ ಮುಖಂಡರುಗಳು ನಗರಸಭೆ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ನಗರಸಭೆ ವಾರ್ಡ್ ನಂಬರ್ 30ಮತ್ತು31ರಲ್ಲಿ ನಡೆದಿರುವ ಸ್ಲಂ ಬೋರ್ಡ್ ಮನೆಗಳ ಅಕ್ರಮದ ಬಗ್ಗೆ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ನಗರಸಭೆವ್ಯಾಪ್ತಿಯ ಹಿರಿಯ ನಾಗರೀಕ ವೇದಿಕೆ ವತಿಯಿಂದ ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ ಹಾಗೂ ಪೌರಾಯುಕ್ತರಾದ ವಾಸೀಂರವರಿಗೆ ಮನವಿಪತ್ರ ಸಲ್ಲಿಸಿ ಅವರು ಮಾತನಾಡಿದರು.

ಅಲ್ಲದೆ, ಹರಿಶ್ಚಂದ್ರಘಾಟ್ ನ ಹೆಸರು ಬದಲಾವಣೆ ಮಾಡಿ ರಂಗನಾಥನಗರ ಎಂದು ಸ್ಲಂಬೋರ್ಡ್ ಮನೆಗಳನ್ನು ನಿರ್ಮಾಣ ಮಾಡಲು ಅನುಮತಿ ಕೊಟ್ಟವರ ಹಿಂದಿನ ಉದ್ದೇಶವೇನು ಎಂಬುದನ್ನು ತನಿಖೆ ನಡೆಸಬೇಕಲ್ಲದೆ, ಸ್ಲಂಬೋರ್ಡಿನಿಂದ ಒಂದು ಮನೆಗೆ ಸರ್ಕಾರ ಎಷ್ಟು ಹಣ ನಿಗದಿ ಮಾಡಿರುತ್ತಾರೆ ಆ ಹಣ ಸರಿಯಾಗಿ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂಬುದನ್ನು ತನಿಖೆ ಮಾಡಬೇಕು ಎಂಬುದಾಗಿ ಆಗ್ರಹಿಸಿದರು

ಸ್ಲಂಬೋರ್ಡ್ ಮನೆ ಕಟ್ಟಲು ಕಾರ್ಮಿಕ ಇಲಾಖೆ ಕಾರ್ಡ್ ಬಳಸಿ ಅಲ್ಲಿಂದ 60,000 ಹಣ ವಸೂಲಿ ಮಾಡುತ್ತಾರೆ ಎಂಬ ವದಂತಿಗಳು ಕೇಳಿ ಬರುತ್ತಿದ್ದು, ಈ ಎಲ್ಲಾ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ತನಿಖೆ ನಡೆಸಬೇಕು ಎಂಬುದಾಗಿ ಹಿರಿಯ ನಾಗರೀಕ ವೇದಿಕೆ ಮುಖಂಡರು ಒತ್ತಾಯಿಸಿದ್ದಾರೆ.