
ಹಿರಿಯೂರು:
ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡರೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂಬುದಾಗಿ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎಂ.ವೀರಣ್ಣ ಅವರು ಹೇಳಿದರು.
ತಾಲ್ಲೂಕಿನ ಧರ್ಮಪುರ ಗ್ರಾಮದ ಶ್ರೀ ಪಂಚಲಿಂಗೇಶ್ವರ ಗ್ರಾಮಾಂತರ ಪ್ರೌಢಶಾಲೆಯ 1982-84ನೇ ಸಾಲಿನ ಹಳೇ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಡಿ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆಗಾಗಿ ಅಂದಿನ ಕೃಷಿ ಸಚಿವರಾದ ಬಿ.ಎಲ್.ಗೌಡ ಅವರು ಪಂಚಲಿಂಗೇಶ್ವರ ಗ್ರಾಮಾಂತರ ಪ್ರೌಢಶಾಲೆಯನ್ನು ಸ್ಥಾಪಿಸಿದ್ದರು. ಅಂದಿನಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಬೇರೆ ಬೇರೆ ಕಡೆ ಉನ್ನತ ಸ್ಥಾನದಲ್ಲಿರುವುದು ನಮಗೆ ತುಂಬಾ ಸಂತೋಷವಾಗಿದೆ.
ಪ್ರತಿಯೊಬ್ಬರೂ ಏನನ್ನಾದರೂ ಸಾಧಿಸುವ ಹಠ ಇಟ್ಟುಕೊಳ್ಳಬೇಕು. ಆ ಮೂಲಕ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು .ಎಂದರಲ್ಲದೆ, ಎಂಬುದಾಗಿ ಅವರು ಹೇಳಿದರು.
ಆಧುನಿಕತೆಯ ಭರಾಟೆಯಲ್ಲಿ ಸಂಸ್ಕಾರ ಮರೆಯುತ್ತಿರುವ ಈ ಹೊತ್ತಿನಲ್ಲಿ ನಾಲ್ಕು ದಶಕದ ನಂತರವೂ ತಮ್ಮ ಗುರುಗಳನ್ನು ನೆನೆದ ವಿದ್ಯಾರ್ಥಿಗಳು ಅಂದು ಎಂತಹ ಗುಣಮಟ್ಟದ ವಿದ್ಯಾಭ್ಯಾಸ , ಸನ್ನಡತೆ ಕಲಿತಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ ಎಂಬುದಾಗಿ ಅವರು ಹೇಳಿದರು.

ನಿವೃತ್ತ ಹಿಂದಿ ಶಿಕ್ಷಕರಾದ ಕೆ.ಕೃಷ್ಣಪ್ಪ ಅವರು ಮಾತನಾಡಿ ಪ್ರೌಢಶಾಲಾ ಶಿಕ್ಷಣ ಮುಗಿದ ನಲವತ್ತು ವರ್ಷಗಳ ನಂತರ ಸ್ನೇಹಿತರು ಒಗ್ಗೂಡಿ ಗುರುವರ್ಯರನ್ನು ನೆನೆದು ಗೌರವ ಸಮರ್ಪಣೆ ನೀಡುತ್ತಿರುವುದು ತುಂಬಾ ಸಂತೋಷವಾಗಿದ್ದು ಇದು ಹಳೇ ವಿದ್ಯಾರ್ಥಿಗಳ ಉತ್ತಮ ಸಂಸ್ಕಾರವನ್ನು ತೋರಿಸುತ್ತದೆ ಎಂಬುದಾಗಿ ಅವರು ಹೇಳಿದರು.
ನಿವೃತ್ತ ಶಿಕ್ಷಕರನ್ನು ಬೆಳ್ಳಿ ರಥದ ಮೂಲಕ ಧರ್ಮಪುರದ ಶನೇಶ್ವರ ದೇವಸ್ಥಾನದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ವೇದಿಕೆಯವರೆಗೂ ವೀರಗಾಸೆ ತಂಡದವರ ನೃತ್ಯದ ಮೂಲಕ ಮೆರಣಿಗೆಯಲ್ಲಿ ಕರೆತರಲಾಯಿತು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಜೆ.ಸಿದ್ದೇಶ್ವರ, ಕೆ.ಪಾಂಡುರಂಗಪ್ಪ, ಧರ್ಮಪುರ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕೆ.ಪುಟ್ಟಸ್ವಾಮಿಗೌಡ, ಹೆಚ್.ಆರ್.ರಾಮಚಂದ್ರ, ಕೆ.ಸುಧಾ, ಮಂಗಳಗೌರಿ, ರಾಜೀವ, ಕೇಶವಮೂರ್ತಿ, ತಿಪ್ಪೇಸ್ವಾಮಿ, ವೆಂಕಟಾಚಲ, ಶಶಿಕಲಾ, ಹೇಮಲತಾ, ಪುಟ್ಟರಂಗ, ಈರಮಲ್ಲ, ರಾಜನ್, ಗರೀಬ್ ವಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
