
ಹಿರಿಯೂರು:
ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ಸಾರ್ವಜನಿಕರ ಗಮನಕ್ಕೆ ತರದೆ ಬೆರಳೆಣಿಕೆಯಷ್ಟು ಜನರನ್ನು ಸೇರಿಸಿಕೊಂಡು ಗ್ರಾಮಸಭೆ ನಡೆಸಿದ್ದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಸಭೆಯನ್ನು ರದ್ದುಪಡಿಸಿದ ಘಟನೆ ನಡೆದಿದೆ.
ಪಿಲ್ಲಾಲಿ ಗ್ರಾಮದ ಸದಸ್ಯರಾದ ಪಿ.ಹೆಚ್.ಗೌಡ ಅವರು ಮಾತನಾಡಿ ದಿಂಡಾವರ ಗ್ರಾಮಪಂಚಾಯಿತಿಗೆ 23ಹಳ್ಳಿಗಳು ಸೇರಿದ್ದು, 21 ಸದಸ್ಯರಿದ್ದಾರೆ. ಸಭೆಗೆ ಪಂಚಾಯಿತಿ ಅಧ್ಯಕ್ಷರೇ ಬಂದಿಲ್ಲ. ವಾರ್ಷಿಕ ಲೆಕ್ಕ ಪರಿಶೋಧನೆ ಉದ್ದೇಶದಿಂದ ಸಭೆಯಿಂದ ಚುನಾಯಿತ ಪ್ರತಿನಿಧಿಗಳನ್ನು, ಸಾರ್ವಜನಿಕರನ್ನು ಹೊರಗಿಡುವ ಮೂಲಕ ಏನು ಮಾಡಲು ಹೊರಟಿದ್ದೀರಿ ಎಂಬುದಾಗಿ ಏರು ಧ್ವನಿಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಿರುವ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ವರದಿ ಮಂಡಿಸಬೇಕು. ಸದಸ್ಯರು ಹಾಗೂ ಗ್ರಾಮಸ್ಥರು ಕಾಮಗಾರಿ ನಡೆದಿದೆಯೇ ಇಲ್ಲವೇ ಎಂಬುದನ್ನು ಹೇಳಬೇಕು.ಜನರ ಅಭಿಪ್ರಾಯ ಕೆಳದೆ ವರದಿ ಓದುವುದು ಸರಿಯಲ್ಲ ಎಂಬುದಾಗಿ ಸಭೆಯಲ್ಲಿದ್ದವರು ಧ್ವನಿ ಎತ್ತಿದಾಗ ವರದಿ ವಾಚನವನ್ನು ಸ್ಥಗತಗೊಳಿಸಲಾಯಿತು.
ವರದಿಯಲ್ಲಿ ಹೇಳಿದ ಬಹುತೇಕ ಕಾಮಗಾರಿಗಳು ಸರ್ಕಾರಿ ಕಡತಗಳಿಗೆ ಸೀಮಿತವಾಗಿವೆ. ನಿದರ್ಶನವಾಗಿ , ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರೆ, ಅಲ್ಲಿ ಕಾಮಗಾರಿ ನಡೆಯದೇ ಇರುವುದನ್ನು ಪ್ರತ್ಯಕ್ಷವಾಗಿ ತೋರಿಸುತ್ತೇವೆ ಎಂಬುದಾಗಿ ಗ್ರಾಮಸ್ಥರು ಸವಾಲು ಹಾಕಿದರು.
ಮುಂದಿನ ಸಭೆಯನ್ನು ತಾಲ್ಲೂಕು ಪಂಚಾಯಿತಿ ಇ.ಒ. ಸಮ್ಮುಖದಲ್ಲಿಯೇ ನಡೆಸಬೇಕು. ಸರ್ಕಾರಿ ದಾಖಲೆಯಲ್ಲಿ ಉಲ್ಲೇಖಿಸಿರುವ ಕಾಮಗಾರಿಗಳು ಭೌತಿಕವಾಗಿ ಆಗಿರುವುದನ್ನು ಸಾರ್ವಜನಿಕರಿಗೆ ತೋರಿಸಿ ಒಪ್ಪಿಗೆ ಪಡೆಯಬೇಕು ಎಂಬುದಾಗಿ ಗ್ರಾಮಸ್ಥರು ಪಟ್ಟುಹಿಡಿದರು.

ಪಂಚಾಯಿತಿ ವ್ಯಾಪ್ತಿಯ 2.5ಕೋಟಿ ರೂ. ವೆಚ್ಚದ ಕಾಮಗಾರಿ ನಡೆಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶೇ.80ರಷ್ಟು ಕೃಷಿ ಹೊಂಡಗಳೇ ನಿರ್ಮಾಣವಾಗಿಲ್ಲ.15ನೇ ಹಣಕಾಸು ಯೋಜನೆಯಡಿ ಒಂದೇ ಅಂಗಡಿಗೆ 30 ಲಕ್ಷದಷ್ಟು ಬಿಲ್ ಪಾವತಿಸಿದ್ದು, ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಪಂಚಾಯಿತಿಯು ಅಕ್ರಮಗಳ ತವರು ಮನೆಯಾಗಿದೆ ಎಂಬುದಾಗಿ ಸಾರ್ವಜನಿಕರು ಆರೋಪಿಸಿದರು.
ಪ್ರತಿರೋಧ ವ್ಯಕ್ತವಾದ ಕಾರಣ, ಸಭೆಯನ್ನು ರದ್ದುಪಡಿಸಲಾಯಿತು ಎಂಬುದಾಗಿ ಪಿ.ಡಿ.ಒ.ಲೋಕೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಈ ಸಭೆಗೆ ನೋಡಲ್ ಅಧಿಕಾರಿ ರವೀಂದ್ರ, ತಾಲ್ಲೂಕು ಪಂಚಾಯಿತಿ ಎಂಜಿನಿಯರ್ ಗಳಾದ ಕುಶಾಲ್, ಹರ್ಷ, ಪಿ.ಡಿ.ಒ ಲೋಕೇಶ್ ಆಗಮಿಸಿದ್ದರು.
