
ಹಿರಿಯೂರು:
ತಮ್ಮ ಸಂಶೋಧನಾ ಕೃತಿಗಳು ಎಷ್ಟೇ ಮೌಲ್ಯಯುತವಾಗಿದ್ದರೂ ಲೇಖಕರು ಬೇರೆ ಬೇರೆ ಕಾರಣಗಳಿಂದ ಪ್ರಕಟಣೆಗೆ ಹಿಂಜರಿಯುತ್ತಾರೆ ಎಂಬುದಾಗಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಎ.ರಘುರಾಮ್ ಅವರು ಹೇಳಿದರು.
ನಗರದ ವಾಣಿಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಆರ್.ಮಹೇಶ್ ಅವರು ರಚಿಸಿರುವ “ತ.ರಾ.ಸು. ಕಾದಂಬರಿ ಲೋಕ-ಸ್ತ್ರೀಸಂವೇದನೆ” ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಮಹೇಶ್ ಅವರು ಪ್ರಗತಿಶೀಲ ಸಾಹಿತ್ಯದ ಪರಿಚಯ ಮಾಡಿಸುವ ಮೂಲಕ ತ.ರಾ.ಸು ಅವರ ಕಾದಂಬರಿಗಳನ್ನು ಸೂಕ್ಷ್ಮ ವಿಮರ್ಶೆಗೆ ಒಳಪಡಿಸಿದ್ದಾರೆ. ಕಾದಾಂಬರಿಗಳಲ್ಲಿ ಕಂಡುಬರುವ ಸ್ತ್ರೀ-ಸಂವೇದನೆಯನ್ನು ವಿಸ್ತೃತವಾಗಿ ಹೇಳಲಾಗಿದೆ.
ಇಂತಹ ಸಂಶೋಧನಾತ್ಮಕ ಕೃತಿಗಳು ಹೆಚ್ಚೆಚ್ಚು ಪ್ರಕಟವಾಗಬೇಕು. ಸಂಶೋಧನಾ ಬರಹಗಳನ್ನು ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಆರ್.ವಲಿ ಅವರು ಮಾತನಾಡಿ ಲೇಖಕರು ಹಲವು ಬಾರಿ ಕೃತಿಗಳನ್ನು ರಚಿಸಿದರೆ, ಕೆಲವೊಮ್ಮೆ ಕೆಲವು ಕೃತಿಗಳೇ ಲೇಖಕರನ್ನು ರಚಿಸುತ್ತವೆ. ಅಂತಹ ಸಂಶೋಧನಾ ಬರಹಗಳು ಈ ಕೃತಿಯಲ್ಲಿದೆ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷ್ಯತೆಯನ್ನು ಪ್ರಾಂಶುಪಾಲರು ಹಾಗೂ ಪುಸ್ತಕದ ಲೇಖಕರಾದ ಆರ್.ಮಹೇಶ್ ಅವರು ವಹಿಸಿದ್ದರು. ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಿ.ಧರಣೇಂದ್ರಯ್ಯ, ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಬಿ.ಆರ್.ಹೇಮಲತಾ, ಕಚೇರಿ ಅಧೀಕ್ಷಕರಾದ ಪಿ.ಎನ್.ನರಸಿಂಹಮೂರ್ತಿ ಅವರು ಮಾತನಾಡಿದರು. ಉಪನ್ಯಾಸಕರಾದ ರೇಖಾ ಕಾರ್ಯಕ್ರಮ ನಿರೂಪಿಸಿ, ದಯಾನಂದ ಸ್ವಾಗತಿಸಿ, ಸಿ.ಆರ್.ತಿಪ್ಪೇಸ್ವಾಮಿ ವಂದಿಸಿದರು.
