
ಹಿರಿಯೂರು:
ಹಿರಿಯೂರು ಸಮೀಪ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಂತೆ ಆದಿವಾಲ ಗ್ರಾಮದ ಬಳಿ ನೂತನವಾಗಿ ಟೊಮೆಟೊ ಮಂಡಿಯನ್ನು ಉದ್ಘಾಟನೆ ಮಾಡುತ್ತಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ ಎಂಬುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ. ಹೊರಕೇರಪ್ಪ ಅವರು ಹೇಳಿದರು.
ತಾಲ್ಲೂಕಿನ ಆದಿವಾಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಹಿರಿಯೂರು ಕಿಸಾನ್ ಜೈ ಕಿಸಾನ್ ಟೊಮ್ಯಾಟೋ ತರಕಾರಿ ಮತ್ತು ಹಣ್ಣು ಕಮಿಷನ್ ಮಂಡಿ ಹಾಗೂ ಟೊಮೆಟೊ ತರಕಾರಿ ಮಂಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅತಿ ಹೆಚ್ಚು ಟೊಮೇಟೊ ಹಣ್ಣು ಬೆಳೆ ಬೆಳೆಯುತ್ತಿದ್ದು, ಈ ಟೊಮೆಟೊ ಮಾರುಕಟ್ಟೆ ರೈತರಿಗೆ ವರದಾನವಾಗಿದೆ. ಟೊಮೆಟೊ ಬೆಳೆ ಬೆಳೆದ ರೈತರು ದುಬಾರಿ ವೆಚ್ಚ ಖರ್ಚು ಮಾಡಿ ಕೋಲಾರ ಜಿಲ್ಲೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುಬೇಕಿತ್ತು, ಇದರಿಂದ ರೈತರಿಗೆ ತುಂಬಾ ದುಬಾರಿ ವೆಚ್ಚ ತಗುಲುತ್ತಿತ್ತು, ಆದರೆ ಇಂದು ತಾಲೂಕಿನಲ್ಲಿ ನೂತನ ಮಂಡಿ ಆಗಿರುವುದರಿಂದ ರೈತರಿಗೆ ಸಾಗಾಣಿಕೆಯ ದುಬಾರಿ ವೆಚ್ಚ ಮತ್ತು ಸಮಯ ಉಳಿತಾಯವಾಗುತ್ತದೆ.
ಈ ಮಾರುಕಟ್ಟೆ ಪ್ರಾರಂಭವಾಗಿರುವುದರಿಂದ ರೈತರು ಬೆಳೆದ ತರಕಾರಿ, ಹಣ್ಣು ಹಂಪಲು, ಇತರೆ ಬೆಳೆಗಳನ್ನು ಇದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಿಂದ ರೈತರಿಗೆ ಆರ್ಥಿಕವಾಗಿ ವರದಾನವಾಗುತ್ತದೆ. ಈ ಮಂಡಿಗೆ ಕೋಲಾರ,ಚಿಕ್ಕಮಗಳೂರು,ಅನಂತಪುರ,ಬಾಣವರ ಇತರೆ ಕಡೆಯಿಂದ ಬಿಡ್ ದಾರರರು ಆಗಮಿಸಿದ್ದು ಮುಂದಿನ ದಿನಗಳಲ್ಲಿ ಹೊರ ರಾಜ್ಯದ ಬಿಡ್ ದಾರರನ್ನು ಕರೆಸುವಂತೆ ಮನವಿ ಮಾಡಿದರು.
ಈ ದಿನ ಮಾರುಕಟ್ಟೆಯಲ್ಲಿ ಪ್ರಪ್ರಥಮವಾಗಿ ಸುಮಾರು 1,500 ಬಾಕ್ಸ್ ಟೊಮೆಟೊ ಬಂದಿದ್ದು, 1ನೇ ಕ್ವಾಲಿಟಿ 400 ರಿಂದ 570 ರೂಪಾಯಿ, 2ನೇ ಕ್ವಾಲಿಟಿ 160 ರಿಂದ 250 ರೂಪಾಯಿ ರೈತರಿಗೆ ಬೆಲೆ ಸಿಕ್ಕಿರುತ್ತದೆ. ಕಿಸಾನ್ ಜೈ ಕಿಸಾನ್ ಟೊಮ್ಯಾಟೋ ತರಕಾರಿ ಮತ್ತು ಹಣ್ಣು ಕಮಿಷನ್ ಮಂಡಿ ಹಾಗೂ ಟೊಮೆಟೊ ತರಕಾರಿ ಮಂಡಿ ನೂರಾರು ರೈತರ ಬದುಕಿಗೆ ವರದಾನವಾಗಲಿದೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಂಡಿ ಮಾಲೀಕರಾದ ಕಿಸಾನ್ ಸಯದುಲ್ಲ ಖಾನ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರಾದ ಮೊಹಮದ್ ಫಕ್ರುದ್ದೀನ್, ಸೈಯದ್ ಇರ್ಷದ್ ಮೌಲಾನ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಎಂ.ಲಕ್ಷ್ಮಿಕಾಂತ್, ರಾಜಶೇಖರ್, ತಿಪ್ಪೇಸ್ವಾಮಿ, ಅನ್ಸರ್ ಅಲಿ, ರಿಜ್ವಾನ್ ಖಾನ್, ನೋಟರಿ ಷಾ ನವಾಜ್, ತ್ರಿಯಂಬಕಮೂರ್ತಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
