
ಹಿರಿಯೂರು :
ನಗರದ ಸಾರ್ವಜನಿಕರು, ಅಂಗಡಿ, ಹೋಟೆಲ್ ಗಳ ಮಾಲೀಕರು ರಸ್ತೆಗೆ ಕಸವನ್ನು ಹಾಕದೇ ಸ್ವಚ್ಛತೆ ಕಾಪಾಡಬೇಕು, ರಸ್ತೆಗೆ ಕಸ ಹಾಕುವವರಿಗೆ ನಗರಸಭೆ ವತಿಯಿಂದ ದಂಡ ವಿಧಿಸಲಾಗುವುದು ಎಂಬುದಾಗಿ ನಗರಸಭೆ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಸಂಧ್ಯಾ ಎಚ್ಚರಿಕೆ ನೀಡಿದರು.
ನಗರದ ಪ್ರಧಾನ ರಸ್ತೆ ಎರಡು ಬದಿಗಳಲ್ಲಿರುವ ಮತ್ತು ಹುಳಿಯಾರು ರಸ್ತೆ ಎರಡು ಬದಿಗಳಲ್ಲಿರುವ ನೈಟ್ ಹೋಟಲ್ ಗಳಲ್ಲಿ ಪೌರಾಯುಕ್ತರಾದ ಎ.ವಾಸಿಂರವರ ಸೂಚನೆಯ ಮೇರೆಗೆ ನಿರಂತರವಾಗಿ ಮೂರು ದಿನಗಳ ಕಾಲ ಹೋಟೆಲ್ ಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ, ಆಹಾರಕ್ಕೆ ಬಳಸುವ ಕಲರ್, ಟೆಸ್ಟಿಂಗ್ ಪೌಡರ್, ಹೋಟೆಲ್ ಗಳ ಶುಚಿತ್ವದ ಬಗ್ಗೆ ಸುಮಾರು 68 ಅಂಗಡಿಗಳನ್ನು ಪರಿಶೀಲಿಸಿ ನಂತರ ಅವರು ಮಾತನಾಡಿದರು.

ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕಾರಕವಾಗಿದ್ದು, ಪ್ಲಾಸ್ಟಿಕ್ ಯಿಂದ ದೂರ ಇರಿ ಸ್ವಚ್ಛತೆಗೆ ಆದ್ಯತೆ ನೀಡಿ, ಆಹಾರಕ್ಕೆ ಬಳಸುವ ಕಲರ್, ಟೆಸ್ಟಿಂಗ್ ಪೌಡರ್ ಬಳಕೆ ಆರೋಗ್ಯಕ್ಕೆ ಹಾನಿಕರ, ಸಾರ್ವಜನಿಕರ ಸುರಕ್ಷತೆಗಾಗಿ ಆಹಾರಕ್ಕೆ ಕಲರ್, ಟೆಸ್ಟಿಂಗ್ ಪೌಡರ್ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು ಎಂಬುದಾಗಿ ಹೋಟೆಲ್ ಮಾಲೀಕರಿಗೆ ಸೂಚನೆ ನೀಡಿದರು.

ನಗರಸಭೆ ಆರೋಗ್ಯ ನಿರೀಕ್ಷಕರಾದ ಸುನೀಲ್ ಕುಮಾರ್ ಮಾತನಾಡಿ, ಹೋಟಲ್ ಗಳಲ್ಲಿ ವ್ಯಾಪಾರ ಮಾಡುವವರು ಸಾರ್ವಜನಿಕರ ಆರೋಗ್ಯವನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು, ಯಾವುದೇ ರೀತಿಯ ಟೆಸ್ಟಿಂಗ್ ಪೌಡರ್ ಅಥವಾ ಕಲರ್ ಬಳಸಬಾರದು, ಸಾರ್ವಜನಿಕರು ಕಡಿಮೆ ಬೆಲೆ ಎಂದು ಹೆಚ್ಚಾಗಿ ಫುಟ್ಪಾತ್ ಹೋಟೆಲ್ ಗಳಿಗೆ ಬರುವುದರಿಂದ ಒಳ್ಳೆಯ ಶುಚಿ-ರುಚಿಯಾದ ಆಹಾರ ಕೊಡಬೇಕು ಎಂದರಲ್ಲದೆ,

ತಳ್ಳೋಗಾಡಿಗಳಿಗೆ ಓಪನ್ ಬಿಡುವುದರಿಂದ ರಸ್ತೆಯ ಧೂಳು ಆಹಾರದ ಮೇಲೆ ಕುಳಿತು ಹಲವಾರು ರೋಗಗಳು ಹರಡುವ ಸಾಧ್ಯತೆಗಳಿರುವುದರಿಂದ ಗ್ಲಾಸ್ ಫಿಟ್ಟಿಂಗ್ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ, ನಗರದ ಸಾರ್ವಜನಿಕರು ಅಂಗಡಿ ಹೋಟೆಲ್ ಮಾಲೀಕರುಗಳು ಸ್ವಚ್ಛತೆ ಕಾಪಾಡುವ ಜೊತೆಗೆ ನಗರವನ್ನು ಸುಂದರವಾಗಿಡಬೇಕು ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕರುಗಳಾದ ಶ್ರೀಮತಿ ಸಂಧ್ಯಾ, ಸುನೀಲ್ ಕುಮಾರ್, ಅಶೋಕ್, ಮಹಾಲಿಂಗಪ್ಪ ಸೇರಿದಂತೆ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
