
ಹಿರಿಯೂರು:
ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರ ಜನಪರ ಆಡಳಿತ,ಅಭಿವೃದ‍್ಧಿಪರ ಚಿಂತನೆ ರಾಜ್ಯಸರ್ಕಾರಕ್ಕೆ ಶ್ರೀರಕ್ಷೆಯಾಗಿದೆ ಎಂಬುದಾಗಿದೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ತಾಲ್ಲೂಕಿನ ಬಬ್ಬೂರು ಗ್ರಾಮದಲ್ಲಿ ನೂತನ ಅಂಗನವಾಡಿಕೇಂದ್ರ ಲೋಕಾರ್ಪಣೆ, ವಿವಿಧ ಅಭಿವೃದ‍್ಧಿ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪಂಚಗ್ಯಾರಂಟಿಗಳ ಜತೆ ಇತರ ಅಭಿವೃದ‍್ದಿ ಕೆಲಸಗಳಿಗೂ ಸರ್ಕಾರ ಅಗತ್ಯ ಅನುದಾನ ನೀಡಿದೆ. ಸಿ.ಎಂ.ಸಿದ್ಧರಾಮಯ್ಯ, ಡಿ.ಸಿ.ಎಂ.ಡಿ.ಕೆ. ಶಿವಕುಮಾರ್ ನಾಯಕತ್ವದಲ್ಲಿ ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಜಿಲ್ಲೆಯ ಸಮಗ್ರ ಅಭಿವೃದ‍್ದಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂಬುದಾಗಿ ಅವರು ಹೇಳಿದರು.
ಹಿರಿಯೂರು-ಧರ್ಮಪುರ ರಾಜ್ಯ ಹೆದ್ದಾರಿ ಅಭಿವೃದ್ಧಿ, ಜೆ.ಜೆ.ಹಳ್ಳಿ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಸರ್ಕಾರದ ಮಟ್ಟದಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದ್ದು, ಶೀಘ್ರ ನೀರಾವರಿ ಯೋಜನೆ ಕನಸು ನನಸಾಗಲಿದೆ ಎಂಬುದಾಗಿ ಅವರು ಹೇಳಿದರು.

ಕೃಷಿಪಂಪ್ ಸೆಟ್ ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ತಾಲ್ಲೂಕಿನ ವಿವಿಧೆಡೆ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲಾಗಿದೆ. ಶೀಘ್ರ ಲೋಕಾರ್ಪಣೆ ಮಾಡಲಾಗುವುದು. ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಬ್ಯಾರೇಜ್ ನಿರ್ಮಾಣಕ್ಕೆ ವಿಶೇಷ ಅನುದಾನ ಮೀಸಲಿಡಲಾಗಿದೆ. ಸಂಗೇನಹಳ್ಳಿ ಸಮೀಪ ವೇದಾವತಿ ನದಿಗೆ ತೂಗು ಸೇತುವೆ ಶೀಘ್ರ ಚಾಲನೆ ನೀಡಲಾಗುವುದು ಎಂಬುದಾಗಿ ಅವರು ಹೇಳಿದರು.

ಮಕ್ಕಳ ಕಲಿಕೆಗೆ ಮೊದಲ ಮೆಟ್ಟಿಲಾಗಿರುವ ಅಂಗನವಾಡಿ ಕೇಂದ್ರಗಳ ಸ್ಥಾಪನೆ, ಅಗತ್ಯ ಮೂಲ ಸೌಕರ್ಯ, ಶುದ್ಧ ಕುಡಿಯುವ ನೀರು, ಮಕ್ಕಳ ಸುರಕ್ಷತೆ, ಗುಣಮಟ್ಟದ ಆಹಾರ ವಿತರಣೆಗೆ ಕ್ರಮವಹಿಸಲಾಗಿದೆ. ಅಗತ್ಯವಿರುವೆಡೆ ಹೊಸ ಅಂಗನವಾಡಿ ಸ್ಥಾಪನೆಗೆ ವಿಶೇಷ ಅನುದಾನ ನೀಡಲಾಗುವುದು ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಓಂಕಾರಪ್ಪ, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರಾದ ಹೇಮಂತ್ ಯಾದವ್, ಸದಸ್ಯ ಏಕಾಂತಪ್ಪ, ಗಿರೀಶ್, ಗೌರೀಶ್, ಪ್ರಕಾಶ್, ಪ್ರಶಾಂತ್, ಉಮೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

