
ಹಿರಿಯೂರು:
ವಾಹನ ಸವಾರರು ಸದಾ ತಮ್ಮ ಹಾಗೂ ತಮ್ಮನ್ನು ಅವಲಂಬಿಸಿರುವ ಕುಟುಂಬದ ಬಗ್ಗೆ ಯೋಚಿಸಬೇಕು. ಪೋಲಿಸರು ದಂಡಹಾಕುತ್ತಾರೆ ಎಂಬ ಕಾರಣಕ್ಕೆ ಸಂಚಾರ ನಿಯಮಗಳನ್ನು ಪಾಲಿಸುವುದು ಸರಿಯಲ್ಲ ಎಂಬುದಾಗಿ ಡಿ.ವೈ.ಎಸ್.ಪಿ. ಟಿ.ಎಂ. ಶಿವಕುಮಾರ್ ಅವರು ಹೇಳಿದರು.
ನಗರದಲ್ಲಿ ಹಿರಿಯೂರು ಪೊಲೀಸ್ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಪಘಾತದಲ್ಲಿ ಶೇ.90ಕ್ಕೂ ಹೆಚ್ಚಿನ ಸಾಲಭ್ಯಗಳು ಹೆಲ್ಮೆಟ್ ಇಲ್ಲದೆ ವಾಹನ ಓಡಿಸುವುದರಿಂದ ಸಂಭವಿಸುತ್ತಿವೆ. ಚಾಲನ ಪರವಾನಗಿ ಇಲ್ಲದೆ ವಾಹನ ಓಡಿಸುವುದು, ವಾಹನಕ್ಕೆ ವಿಮೆ ಮಾಡಿಸದಿರುವುದು, ವೇಗದ ಚಾಲನೆ, ನಿಗದಿಗಿಂತ ಹೆಚ್ಚಿನ ಪ್ರಯಾಣಿಕರು ಹೋಗುವುದು ಎಲ್ಲವೂ ಶಿಕ್ಷಾರ್ಹ ಅಪರಾಧಗಳಾಗಿದ್ದು, ರಸ್ತೆ ನಿಯಮಗಳನ್ನು ಪಾಲಿಸಿದರೆ ಸಾವು-ನೋವುಗಳ ಸಂಖ್ಯೆ ಕಡಿಮೆ ಮಾಡಬಹುದು ಎಂಬುದಾಗಿ ಅವರು ಹೇಳಿದರು.

ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಕರಪತ್ರಗಳನ್ನು ಹಂಚುವ ಮೂಲಕ ಪೊಲೀಸರು ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ಆನಂದ್, ಎಸ್.ಐ.ಲಕ್ಷ್ಮಿನಾರಾಯಣ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

