
ಹಿರಿಯೂರು:
ನಗರದ ನಗರಸಭೆ ವ್ಯಾಪ್ತಿಯಲ್ಲಿ ಹಲವಾರು ಬಡಕುಟುಂಬಗಳು ಗುಡಿಸಲು, ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದು,ಇವರು ಸೂರಿಲ್ಲದೆ ಸಂಕಟದಲ್ಲಿದ್ದಾರೆ. ಸರ್ಕಾರ ಬಡ ನಿವೇಶನ ರಹಿತರಿಗೆ ರಾಜೀವ್ ಗಾಂಧಿ ಆವಾಸ್ ಯೋಜನೆಯಡಿ ನಿವೇಶನನೀಡಿ ಮನೆ ಕಟ್ಟಿಕೊಳ್ಳಲು ಧನಸಹಾಯ ಮಾಡಬೇಕು ಎಂಬುದಾಗಿ ಭಾರತ್ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಕಾಂ||ಸುರೇಶ್ ಬಾಬು ಹೇಳಿದರು.
ನಗರದ ನಗರಸಭೆ ಆವರಣದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ ತಾಲ್ಲೂಕು ಸಮಿತಿ ವತಿಯಿಂದ ನಗರದಲ್ಲಿ ವಾಸವಾಗಿರುವ ನಿವೇಶನ ರಹಿತರಿಗೆ ನಿವೇಶನ ಅಥವಾ ನಿವೇಶನ ಇರುವವರಿಗೆ ಮನೆ ಕಟ್ಟಿಕೊಳ್ಳಲು ಧನ ಸಹಾಯ ಬಿಡುಗಡೆ ಮಾಡುವಂತೆ ನಗರಸಭೆ ಪೌರಾಯುಕ್ತ ಎ.ವಾಸಿಂರವರಿಗೆ ಮನವಿಪತ್ರವನ್ನು ಸಲ್ಲಿಸಿ, ನಂತರ ಅವರು ಮಾತನಾಡಿದರು.
ಸ್ವತಂತ್ರ್ಯ ಲಭಿಸಿ 75 ವರ್ಷ ಕಳೆದರೂ ನಮ್ಮ ಜಿಲ್ಲೆಯ ಬಡ ಕುಟುಂಬಗಳಿಗೆ ಸ್ವಂತ ಮನೆಯ ಕನಸು ನನಸಾಗಿಲ್ಲ. ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಬಡ ಕುಟುಂಬಗಳಿಗೆ ಸರ್ಕಾರ ನೀಡುವ ಹಲವು ಯೋಜನೆ ಜಾರಿಯಲ್ಲಿದ್ದರೂ ಅವುಗಳು ಸ್ವಂತ ಸೂರಿಲ್ಲದೆ ಬಾಡಿಗೆ ಮನೆಯಲ್ಲಿ ಅಥವಾ ಎಂದೋ ನೀಡಿದ ಪುಟ್ಟ ಮನೆಯಲ್ಲಿ ಹಲವು ಕುಟುಂಬಗಳು ವಾಸಿಸುತ್ತಿವೆ ಎಂದರಲ್ಲದೆ,
ನಗರದಲ್ಲಿ ವಾಸವಾಗಿರುವ ನಿವೇಶನ ರಹಿತರಿಗೆ ನಿವೇಶನ ಅಥವಾ ನಿವೇಶನ ಇರುವವರಿಗೆ ಮನೆ ಕಟ್ಟಿಕೊಳ್ಳಲು ಧನ ಸಹಾಯ ಬಿಡುಗಡೆ ಮಾಡಬೇಕು. ವಸತಿ ಯೋಜನೆಯಲ್ಲಿ ಆಯ್ಕೆಯಾದವರಿಗೆ ಮನೆ ನಿರ್ಮಿಸಿಕೊಳ್ಳಲು ಅನುದಾನ ಬಿಡುಗಡೆ ಮಾಡಬೇಕು.
ಅಲ್ಲದೆ ಹಲವಾರು ವರ್ಷಗಳಿಂದ ಗೋಪಾಲಪುರ, ವೇದಾವತಿನಗರ, ಹರಿಶ್ಚಂದ್ರಘಾಟ್ ಬಡಾವಣೆಗಳಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಹಕ್ಕು ಪತ್ರಗಳನ್ನು ನೀಡಬೇಕು. ಬಡವರ ಅರ್ಜಿಗಳನ್ನು ಪರಿಶೀಲಿಸಿ, ಸ್ವೀಕರಿಸಿ ಇವರುಗಳಿಗೆ ನಿವೇಶನ ಕೊಟ್ಟು ಮನೆಗಳನ್ನು ಕಟ್ಟಿಸಿ ಕೊಡಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾರತ್ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಕಾಂ||ಸುರೇಶ್ ಬಾಬು, ಅಧ್ಯಕ್ಷರಾದ ಎಂ.ಸಿ.ಕುಮಾರ್, ಮುಖಂಡರಾದ ತಿಪ್ಪಮ್ಮ, ಸಿ.ಪಿ.ಐ. ಸಹಕಾರ್ಯದರ್ಶಿ ಕೆ.ರಾಮಯ್ಯ, ಸಹಕಾರ್ಯದರ್ಶಿ ಎನ್.ಶ್ರೀನಿವಾಸ್, ಸಿ.ಪಿ.ಐ. ಮುಖಂಡರಾದ ರಾಜಣ್ಣ, ಕೆಂಚಮ್ಮ, ಗೀತಾ, ಪರಿವಿನ್ ತಾಜ್, ಇಂದಿರಾ, ಜಯಮ್ಮ, ರತ್ನಮ್ಮ, ಮಹಂತೇಶ್, ಗಾಯಿತ್ರಿ, ಪಾರ್ವತಮ್ಮ, ಷಾಜೀಯ, ಫಾತಿಮಾ, ಸಾದಿಯಾ ರುಕ್ಸಾನ, ರೇಷ್ಮಾ, ಜ್ಯೋತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

