
ಹಿರಿಯೂರು:
ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿರುವ ಕಾರಣ ಶುಕ್ರವಾರ ಒಳಹರಿವಿನಲ್ಲಿ ಸ್ವಲ್ಪ ಪ್ರಮಾಣದ ಇಳಿಕೆಯಾಗಿದ್ದರೂ, ಕೋಡಿಯಿಂದ ಹೊರಬರುತ್ತಿರುವ ನೀರಿನ ಪ್ರಮಾಣ ಹೆಚ್ಚಿದ್ದು, ವೇದಾವತಿ ನದಿ ತುಂಬಿ ಹರಿಯುತ್ತಿದೆ.

ಜಲಾಶಯದ ನೀರಿನ ಮಟ್ಟ ಶುಕ್ರವಾರ 133.50 ಅಡಿ ತಲುಪಿದ್ದು, ಒಳಹರಿವಿನ ಪ್ರಮಾಣ 2,456ಕ್ಯೂಸೆಕ್ ಇದೆ. ಹೊರಹರಿವು 9814 ಕ್ಯುಸೆಕ್ ಇದೆ. ಅಣೆಕಟ್ಟೆಯ ಎರಡು ನಾಲೆಗಳು ಹಾಗೂ ಕೋಡಿಯ ಮೂಲಕ ನೀರು ಹೊರಹೋಗುತ್ತಿದ್ದರೂ ನೀರಿನ ಮಟ್ಟ ಏರುತ್ತಲೇ ಇದೆ.

ಕೇವಲ ಒಂದೂವರೆ ಅಡಿ ನೀರು ಬಂದಲ್ಲಿ ಮತ್ತೊಮ್ಮೆ ಜಲಾಶಯದಲ್ಲಿ ಗರಿಷ್ಠಮಟ್ಟದ ನೀರು ಸಂಗ್ರಹವಾಗಲಿದೆ. ಹಿರಿಯೂರು ನಗರದಲ್ಲಿ ಹಾದು ಹೋಗಿರುವ ವೇದಾವತಿ ನದಿಗೆ ನಿರ್ಮಿಸಿರುವ ಸೇತುವೆ ಪಕ್ಕದಲ್ಲಿ ರುವ ಬಸವಣ್ಣನ ದೇವಸ್ಥಾನ ನದಿಯ ನೀರಿನಲ್ಲಿ ಬಹುತೇಕ ಮುಳುಗಿದ್ದು, ವೇದಾವತಿ ನದಿ ಮೈದುಂಬಿ ಹರಿಯುತ್ತಿದೆ.

